ನವದೆಹಲಿ, ಜೂ.8- ನಿಮಗೆ ಉಬ್ಬಿದ ರಕ್ತನಾಳಗಳ ಸಮಸ್ಯೆಯಿದೆಯೇ? ಹಾಗಾದರೆ ಭಾರತೀಯ ಸೇನೆ ಸೇರುವ ಆಸೆ ಬಿಡಿ. ಉಬ್ಬಿದ ರಕ್ತನಾಳ (ವೆರಿಕೋಸ್‍ವೇನ್) ಸಮಸ್ಯೆಯಿದ್ದರೆ ದೈಹಿಕ ಸಮಸ್ಯೆ ಎದುರಾಗುವುದರಿಂದ ಉಬ್ಬಿದ ರಕ್ತನಾಳವಿರುವ ವ್ಯಕ್ತಿಗಳು ಸೇನೆ ಸೇರಲು ಸಮರ್ಥರಲ್ಲ ಎಂದು ದೆಹಲಿ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಉಬ್ಬಿದ ರಕ್ತನಾಳ ಸಮಸ್ಯೆಯಿರುವ ವ್ಯಕ್ತಿಗಳ ಕಾಲುಗಳಲ್ಲಿ ನೋವು ಕಾಣಿಸಿಕೊಳ್ಳುವುದರಿಂದ ದೀರ್ಘಾವಧಿ ನಿಲ್ಲಲು ಸಾಧ್ಯವಾಗುವುದಿಲ್ಲ. ಹೀಗಾಗಿ ಸೇನೆಯಂತಹ ಕಠಿಣ ಕ್ಷೇತ್ರಗಳಿಗೆ ಅಂತಹ ವ್ಯಕ್ತಿಗಳನ್ನು ನೇಮಕಾತಿ ಮಾಡಿಕೊಳ್ಳಲು ಅವಕಾಶ ನೀಡಬಾರದು ಎಂದು ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಪ್ರತಿಭಾರಾಣಿ ಅವರನ್ನೊಳಗೊಂಡ ವಿಭಾಗೀಯ ಪೀಠ ಮಹತ್ವದ ತೀರ್ಪು ನೀಡಿದೆ. 2015ರಲ್ಲಿ ಸಿಎಪಿಎಫ್ ಕಾನ್ಸ್‍ಟೆಬಲ್ ಹುದ್ದೆಗಾಗಿ ನಡೆದ ಲಿಖಿತ ಪರೀಕ್ಷೆಯಲ್ಲಿ ವ್ಯಕ್ತಿಯೊಬ್ಬ ಉತ್ತೀರ್ಣನಾಗಿದ್ದ. ಆದರೆ, ನಂತರ ನಡೆದ ದೈಹಿಕ ಪರೀಕ್ಷೆಯಲ್ಲಿ ಉಬ್ಬಿದ ರಕ್ತನಾಳದ ಸಮಸ್ಯೆಯಿಂದಾಗಿ ಆತನನ್ನು ತಿರಸ್ಕರಿಸಲಾಗಿತ್ತು.ತನಗೆ ಆದ ಅನ್ಯಾಯದ ವಿರುದ್ಧ ಆ ವ್ಯಕ್ತಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದು, ಸುದೀರ್ಘ ವಿಚಾರಣೆ ನಡೆಸಿದ ವಿಭಾಗೀಯ ಪೀಠ ಉಬ್ಬಿದ ರಕ್ತನಾಳ ಮತ್ತಿತರ ದೈಹಿಕ ಊನ ಸಮಸ್ಯೆಯಿಂದ ಬಳಲುವ ವ್ಯಕ್ತಿಗಳನ್ನು ಸೇನೆಗಳಲ್ಲಿ ನೇಮಕಾತಿ ಮಾಡಿಕೊಳ್ಳಬಾರದು ಎಂದು ಆದೇಶ ನೀಡಿದೆ.