ಸಚಿವ ಸಂಪುಟ ವಿಸ್ತರಣೆಯಾದರೂ ಇನನೂ ಮುಗಿಯದ ಬಂಡಾಯದ ಬೆಂಕಿ

 

ಬೆಂಗಳೂರು, ಜೂ.8-ಸಚಿವ ಸಂಪುಟ ವಿಸ್ತರಣೆಯಾಗಿ ಮೂರು ದಿನಗಳಾದರೂ ಕಾಂಗ್ರೆಸ್‍ನಲ್ಲಿ ಬಂಡಾಯದ ಬೆಂಕಿ ಆರಿಲ್ಲ. ಸಂಪುಟದಲ್ಲಿ ಸ್ಥಾನ ವಂಚಿತರಾದವರ ಅತೃಪ್ತಿ, ಅಸಮಾಧಾನ ದಿನೇ ದಿನೇ ಕಾವೇರತೊಡಗಿದೆ. ಬಂಡಾಯ ಶಮನ ಮಾಡಲು ರಾಜ್ಯ ನಾಯಕರು ಇಂದು ಮಾಡಿದ ಪ್ರಯತ್ನ ಫಲ ನೀಡಿದಂತೆ ಕಂಡುಬಂದಿಲ್ಲ.

ಹೈಕಮಾಂಡ್ ನಾಯಕರು ಮಧ್ಯಪ್ರವೇಶಿಸಿ ಭಿನ್ನಮತ ಬಗೆಹರಿಸಲು ಮುಂದಾಗಬೇಕಾದ ಅನಿವಾರ್ಯತೆ ಎದುರಾಗಿದೆ.
ಪರಿಸ್ಥಿತಿಯ ಲಾಭ ಪಡೆಯಲು ಪ್ರತಿಪಕ್ಷ ಬಿಜೆಪಿ ಪ್ರಯತ್ನ ನಡೆಸುತ್ತಿದೆ. ಮೈತ್ರಿ ಸರ್ಕಾರದಲ್ಲಿ ಉಂಟಾಗಿರುವ ಬಂಡಾಯವನ್ನು ಆರಿಸಲು ಶತಪ್ರಯತ್ನಗಳನ್ನು ಮಾಡಲಾಗುತ್ತಿರುವುದರ ಜೊತೆ ಜೊತೆಗೆ ತಮ್ಮ ನಾಯಕರಿಗೆ ಸಚಿವ ಸ್ಥಾನ ಕೈತಪ್ಪಿದ್ದಕ್ಕಾಗಿ ಬೆಂಬಲಿಗರು ಇಂದೂ ಕೂಡ ಹಲವೆಡೆ ಪ್ರತಿಭಟನೆ ಮುಂದುವರೆಸಿದ್ದಾರೆ.

ಪ್ರಬಲ ಸಚಿವಾಕಾಂಕ್ಷಿಯಾಗಿದ್ದ ಎಂ.ಬಿ.ಪಾಟೀಲ್ ಅವರ ಮನವೊಲಿಕೆಗೆ ಖುದ್ದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸಚಿವರಾದ ಕೆ.ಜೆ.ಜಾರ್ಜ್, ಡಿ.ಕೆ.ಶಿವಕುಮಾರ್, ಆರ್.ವಿ.ದೇಶಪಾಂಡೆ ಅವರು ಅವರ ನಿವಾಸಕ್ಕೆ ತೆರಳಿ ಅಸಮಾಧಾನ ಬಗೆಹರಿಸುವ ಪ್ರಯತ್ನ ನಡೆಸಿದರು.
ಈ ಸಂದರ್ಭದಲ್ಲಿ ಅವರ ನಿವಾಸದ ಬಳಿ ಇದ್ದ ಪಾಟೀಲ್ ಬೆಂಬಲಿಗರು ರಾಜ್ಯ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ. ನಮ್ಮ ನಾಯಕರು ಮಾಡಿದ ತಪ್ಪಾದರೂ ಏನು? ಅವರನ್ನು ಸಂಪುಟದಿಂದ ಕೈಬಿಟ್ಟ ಕಾರಣವೇನು ಎಂದು ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ ನಾಯಕರುಗಳ ಕಾರಿಗೆ ಘೇರಾವ್ ಹಾಕಿ ಎಂ.ಬಿ.ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ.
ಪರಮೇಶ್ವರ್ ಅವರು ಎಂ.ಬಿ.ಪಾಟೀಲ್ ನಿವಾಸದಿಂದ ಹೊರಬಂದಾಗ ಪಾಟೀಲ್ ಬೆಂಬಲಿಗನೊಬ್ಬ ಅವರ ಕಾಲು ಹಿಡಿದು ಪಾಟೀಲ್‍ರನ್ನು ಸಚಿವರನ್ನಾಗಿ ಮಾಡಬೇಕೆಂದು ಮನವಿ ಮಾಡಿದ್ದು ಕಂಡುಬಂತು.

ಅಲ್ಲದೆ, ಜಾರ್ಜ್, ಪರಮೇಶ್ವರ್, ದೇಶಪಾಂಡೆಯವರು ಕಾರು ಹತ್ತಲು ಆಗದಂತೆ ಎಲ್ಲರೂ ಮುತ್ತಿಗೆ ಹಾಕಿ ಒತ್ತಾಯಿಸಿದರು. ಕಾರಿನ ಮುಂದೆ ಮಲಗಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಎಂ.ಬಿ.ಪಾಟೀಲ್ ಅವರು, ಬೆಂಬಲಿಗರು ಶಾಂತಿಯುತವಾಗಿರಬೇಕು, ಈ ರೀತಿ ಅನಾಗರಿಕರಂತೆ ವರ್ತಿಸುವುದು ಬೇಡಿ. ಅವರು ದೊಡ್ಡವರು ನಮ್ಮ ಮನೆಗೆ ಬಂದಿದ್ದಾರೆ. ಅವರಿಗೆ ಗೌರವ ಕೊಡುವುದು ನಮ್ಮ ಕರ್ತವ್ಯ. ಈ ರೀತಿ ಅಡ್ಡಿ ಪಡಿಸುವುದು ಬೇಡ ಎಂದು ತಾವೇ ಸ್ವತಃ ಪ್ರಯಾಸಪಟ್ಟು ಕಾರಿನ ತನಕ ಹೋಗಿ ಕಳುಹಿಸಿಕೊಟ್ಟರು. ಆದರೂ ಬೆಂಬಲಿಗರು ನಾಯಕರ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದುದು ಕೇಳಿ ಬಂತು.

ರಾಜ್ಯದಲ್ಲಿ ಮೈತ್ರಿ ಸರ್ಕಾರವಿದ್ದು, ಸದ್ಯದಲ್ಲೇ ಲೋಕಸಭೆ ಚುನಾವಣೆ ಬರುತ್ತಿರುವುದರಿಂದ ನಾವೆಲ್ಲ ಒಟ್ಟಾಗಿ ಕೆಲಸ ಮಾಡುವ ಅಗತ್ಯವಿದೆ. ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಬೇಕು. ಪಕ್ಷ ನಿಮ್ಮನ್ನು ಪರಿಗಣಿಸಲಿದೆ ಎಂಬ ಭರವಸೆ ನೀಡಿದರು ಎನ್ನಲಾಗಿದೆ.
ನಾನು ಮಾಡಿದ ತಪ್ಪಾದರೂ ಏನು? ನನ್ನ ಕೈ ಬಿಡಲು ಕಾರಣಕರ್ತರು ಯಾರು? ಕಾಂಗ್ರೆಸ್ ಪಕ್ಷಕ್ಕೆ ನಿಷ್ಠೆಯಿಂದ ಕೆಲಸ ಮಾಡಿದ್ದೇ ತಪ್ಪೇ ಎಂದು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ ಎಂದು ತಿಳಿದುಬಂದಿದೆ.

ಎಂ.ಬಿ.ಪಾಟೀಲ್ ನಿವಾಸದಿಂದ ಹೊರಬಂದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಭಿನ್ನಮತ ಸಹಜ. ತಾವು ಅಂದುಕೊಂಡಿದ್ದು ಆಗದಿದ್ದಾಗ ಯಾರಿಗೇ ಆಗಲಿ ಅಸಮಾಧಾನವಾಗುತ್ತದೆ. ಧರ್ಮಸಿಂಗ್ ಅವರ ಸರ್ಕಾರದಲ್ಲಿ ನನ್ನನ್ನು ಕೂಡ ಸಂಪುಟದಿಂದ ಹೊರಗಿಡಲಾಗಿತ್ತು. ಎಲ್ಲದಕ್ಕೂ ತಾಳ್ಮೆ ಮುಖ್ಯ. ತಾಳ್ಮೆ ವಹಿಸುವಂತೆ ಮನವಿ ಮಾಡಿದ್ದೇವೆ ಎಂದು ಹೇಳಿದರು.
ಇತ್ತ ಬೆಳಗಾವಿಯಲ್ಲಿ ಸತೀಶ್ ಜಾರಕಿಹೊಳಿ ಅವರ ಬೆಂಬಲಿಗರು ಇಂದು ಕೂಡ ಪ್ರತಿಭಟನೆ ಮುಂದುವರೆಸಿದ್ದಾರೆ. ಸತೀಶ್ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ಕೈ ತಪ್ಪಿದ್ದಕ್ಕಾಗಿ ಬೆಳಗಾವಿ ಪಕ್ಷದ ಜಿಲ್ಲಾ ಪದಾಧಿಕಾರಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿ ಜಿಲ್ಲೆಯ ಉತ್ತರಗಿ ಬಳಿ ಟಯರ್‍ಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದಾರೆ.

ಅಲ್ಲದೆ, ಪಕ್ಷದ ಜಿಲ್ಲಾ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ತಮ್ಮನ್ನು ನಿರ್ಲಕ್ಷಿಸಿರುವ ಬಗ್ಗೆ ಬೇಸತ್ತು ಎಐಸಿಸಿ ಕಾರ್ಯದರ್ಶಿ ಹುದ್ದೆಗೆ ಫ್ಯಾಕ್ಸ್ ಮೂಲಕ ರಾಹುಲ್‍ಗಾಂಧಿಯವರಿಗೆ ಸತೀಶ್ ಜಾರಕಿ ಹೊಳಿ ರಾಜೀನಾಮೆ ಸಲ್ಲಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು.
ಈ ಕುರಿತು ಸ್ಪಷ್ಟೀಕರಣ ನೀಡಿರುವ ಅವರು, ನಾನು ರಾಜೀನಾಮೆ ನೀಡುವ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಕ್ಷೇತ್ರದ ಮತದಾರರ ಜೊತೆ ಮಾತನಾಡಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.
ಶಾಂತಿನಗರ ಶಾಸಕ ಎನ್.ಎ.ಹ್ಯಾರೀಸ್ ಬೆಂಬಲಿಗರು ಇಂದು ಕೂಡ ಪ್ರತಿಭಟನೆ ನಡೆಸಿ ಹ್ಯಾರೀಸ್ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕೆಂದು ಒತ್ತಾಯಿಸಿದರು.
ಜೆಡಿಎಸ್ ಪಕ್ಷದಲ್ಲಿ ಅಷ್ಟು ಪ್ರಮಾಣದ ಬಂಡಾಯವಿಲ್ಲ. ಹಿರಿಯ ಸದಸ್ಯ ಹೊರಟ್ಟಿ, ಎಚ್.ವಿಶ್ವನಾಥ್ ಮತ್ತಿತರರನ್ನು ದೇವೇಗೌಡರು ಮನವೊಲಿಸಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷದಲ್ಲಿ ಬಂಡಾಯದ ಬೆಂಕಿ ಮಾತ್ರ ಆರಿಲ್ಲ. ನಿನ್ನೆ ಕೆಪಿಸಿಸಿ ಕಚೇರಿ ಬಳಿ ವಿವಿಧ ಶಾಸಕರುಗಳ ಬೆಂಬಲಿಗರು ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ