ಬೆಂಗಳೂರು, ಜೂ.8-ಸಚಿವ ಸಂಪುಟ ವಿಸ್ತರಣೆಯಿಂದ ಉಂಟಾದ ಬಂಡಾಯದ ಆಪತ್ತು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ಕುತ್ತು ತರಲಿದೆಯೇ..? ದಿನೇ ದಿನೇ ಭಿನ್ನಮತೀಯರ ಸಂಖ್ಯೆ ಹೆಚ್ಚಾಗುತ್ತಿದ್ದು, ರಾಜ್ಯಾದ್ಯಂತ ಪ್ರತಿಭಟನೆಗಳು ಕಾವೇರತೊಡಗಿದ್ದು, ಬಂಡಾಯದ ಬೆಂಕಿಗೆ ಮೈತ್ರಿ ಸರ್ಕಾರ ಆಹುತಿಯಾಗಲಿದೆಯೇ? ಅಂತಹ ಒಂದು ಆತಂಕ ಕಾಡತೊಡಗಿದೆ.
ಕಾಂಗ್ರೆಸ್‍ನಲ್ಲಿರುವ 16 ಲಿಂಗಾಯತ ಶಾಸಕರು ಸೇರಿದಂತೆ ಸುಮಾರು 28ಕ್ಕೂ ಹೆಚ್ಚು ಶಾಸಕರು ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದಾರೆ ಎನ್ನಲಾಗಿದೆ.
ಲಿಂಗಾಯತರ ಮುಖಂಡರಾದ ಎಂ.ಬಿ.ಪಾಟೀಲ್ ನೇತೃತ್ವದಲ್ಲಿ ಈಗಾಗಲೇ ಮೂರ್ನಾಲ್ಕು ಸಭೆಗಳನ್ನು ನಡೆಸಿದ್ದು, ಯಾವುದೇ ತೀರ್ಮಾನ ತೆಗೆದುಕೊಳ್ಳುವುದಾದರೂ ಒಟ್ಟಾಗಿಯೇ ತೆಗೆದುಕೊಳ್ಳೋಣ ಎಂಬ ನಿರ್ಧಾರಕ್ಕೆ ಬಂದಿರುವುದು ಮೈತ್ರಿ ಸರ್ಕಾರದ ಸ್ಥಿರತೆ ಮೇಲೆ ಆತಂಕದ ಛಾಯೆ ಮೂಡತೊಡಗಿದೆ.
ಸಚಿವ ಸ್ಥಾನದಿಂದ ವಂಚಿತರಾಗಿರುವ ಎಂ.ಬಿ.ಪಾಟೀಲ್, ಸತೀಶ್ ಜಾರಕಿಹೊಳಿ ಸೇರಿದಂತೆ ಅನೇಕರ ಬಂಡಾಯ ಉಲ್ಭಣಗೊಂಡಿದೆ. ಇದರ ನೇತೃತ್ವದಲ್ಲಿ ಅನೇಕ ಅತೃಪ್ತ ಶಾಸಕರು ಸೇರಿ ಸಭೆಗಳನ್ನು ನಡೆಸಿರುವುದು ಸರ್ಕಾರದ ಗಮನಕ್ಕೆ ಬಂದಿದೆ.
ಇವರ ಮನವೊಲಿಕೆಗೆ ಉಭಯ ಪಕ್ಷಗಳ ನಾಯಕರು ಇಂದು ಕಸರತ್ತು ನಡೆಸಿದರು. ಎಂ.ಬಿ.ಪಾಟೀಲ್ ಮನವೊಲಿಕೆಗೆ ಖುದ್ದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರೇ ಫೀಲ್ಡ್‍ಗಿಳಿದರು. ಪಾಟೀಲ್ ಅವರ ಮನೆಗೆ ತೆರಳಿ ಮಾತುಕತೆ ನಡೆಸಿದರು ಎಂದರೆ ಭಿನ್ನಮತ ಯಾವ ರೀತಿ ಉಲ್ಭಣವಾಗಿದೆ ಎಂಬುದು ಅರ್ಥವಾಗುತ್ತದೆ.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಎಂ.ಬಿ.ಪಾಟೀಲ್ ಅವರು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ನಾಯಕರು. ಅವರು ತಮ್ಮ ಮನಸ್ಸಿಗಾಗಿರುವ ನೋವನ್ನು ಹೇಳಿಕೊಂಡಿದ್ದಾರೆ. ಇದು ನನಗೆ ಸಂಬಂಧಿಸಿದ ವಿಷಯವಲ್ಲದಿದ್ದರೂ ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾಗಿ ನನ್ನ ಜವಾಬ್ದಾರಿಯನ್ನು ನಾನು ನಿರ್ವಹಿಸಬೇಕಿದೆ. ಅದಕ್ಕಾಗಿ ಮಾತುಕತೆ ನಡೆಸಲು ಬಂದಿದ್ದೇನೆ. ಎಂ.ಬಿ.ಪಾಟೀಲ್ ಅವರು ಏಕಾಂಗಿಯಲ್ಲ, ಅವರೊಂದಿಗೆ ಹಲವರು ಇದ್ದಾರೆ. ಅವರೆಲ್ಲ ಈಗಾಗಲೇ ಎರಡು-ಮೂರು ಬಾರಿ ಸಭೆ ನಡೆಸಿದ್ದಾರೆ. ಯಾವುದೇ ನಿರ್ಧಾರಗಳನ್ನು ಕೈಗೊಳ್ಳುವಾಗ ಒಟ್ಟಿಗೆ ತೆಗೆದುಕೊಳ್ಳೋಣ ಎಂಬ ಮಾತುಗಳನ್ನಾಡಿದ್ದಾರೆ. ಅವರ ಭಾವನೆ ಅರ್ಥ ಮಾಡಿಕೊಂಡಿದ್ದೇನೆ. ಅದನ್ನು ಆ ಪಕ್ಷದ ಹೈಕಮಾಂಡ್ ನಾಯಕರಿಗೆ ತಿಳಿಸುತ್ತೇನೆ ಎಂದರು.
ಇದಕ್ಕೂ ಮುಂಚೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ಸಚಿವರಾದ ಜಾರ್ಜ್, ದೇಶಪಾಂಡೆ, ಡಿ.ಕೆ.ಶಿವಕುಮಾರ್ ಅವರು ಎಂ.ಬಿ.ಪಾಟೀಲ್ ಅವರೊಂದಿಗೆ ನಡೆಸಿದ ಮನವೊಲಿಕೆ ಯತ್ನ ವಿಫಲಗೊಂಡಿತ್ತು. ಮಾತುಕತೆಗೆ ಆಗಮಿಸಿದ ಈ ನಾಲ್ವರ ವಿರುದ್ಧ ಪಾಟೀಲ್ ಅವರು ಹರಿಹಾಯ್ದಿದ್ದರು. ಅಲ್ಲದೆ, ಅವರ ಬೆಂಬಲಿಗರು ಇವರಿಗೆ ಘೇರಾವ್ ಹಾಕಿ ಪ್ರತಿಭಟಿಸಿದ್ದರು.
ಒಟ್ಟಾರೆ ಪ್ರತಿಭಟನೆ ಕಾವು ದಿನದಿಂದ ದಿನಕ್ಕೆ ಏರತೊಡಗಿದೆ. ಭಿನ್ನಮತ ಶಮನ ಮಾಡಬೇಕಾದ ಹೈಕಮಾಂಡ್ ಮುಖಂಡರು ಯಾಕೋ ಮಧ್ಯಪ್ರವೇಶ ಮಾಡಿದಂತೆ ಕಂಡುಬರುತ್ತಿಲ್ಲ. ರಾಜ್ಯ ನಾಯಕರ ಪ್ರಯತ್ನಗಳು ಫಲ ನೀಡುತ್ತಿಲ್ಲ. ಮೈತ್ರಿ ಸರ್ಕಾರ ಉಳಿಯುತ್ತೋ, ಉರುಳುತ್ತೋ ಎಂಬ ಆತಂಕ ಎದುರಾಗಿದೆ.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಪರಿಸ್ಥಿತಿಯನ್ನು ಯಾವ ರೀತಿ ನಿಭಾಯಿಸುತ್ತಾರೋ ಕಾದುನೋಡಬೇಕು.