ತೋಟಗಾರಿಕೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಕೂಡಲೇ ಭರ್ತಿ ಮಾಡಬೇಕು: ಕೌಶಲ್ಯ ತರಬೇತಿ ಪಡೆದ ವಿದ್ಯಾರ್ಥಿಗಳ ಆಗ್ರಹ

 

ಬೆಂಗಳೂರು, ಜೂ.8-ತೋಟಗಾರಿಕೆ ಇಲಾಖೆಯಲ್ಲಿ ಖಾಲಿ ಇರುವ ಒಂದು ಸಾವಿರ ಹುದ್ದೆಗಳನ್ನು ಈ ಕೂಡಲೇ ಭರ್ತಿ ಮಾಡಬೇಕೆಂದು ಇಲಾಖೆಯಿಂದ ಕೌಶಲ್ಯ ತರಬೇತಿ ಪಡೆದ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿದ್ಯಾರ್ಥಿ ಸಂತೋಷ್, ರಾಜ್ಯದಲ್ಲಿ 410 ತೋಟಗಾರಿಕಾ ಕ್ಷೇತ್ರಗಳು, 32 ಉದ್ಯಾನವನಗಳು, 3 ಗಿರಿಧಾಮಗಳು, ತೋಟಗಾರಿಕೆ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿವೆ. ಇಲಾಖೆಯಲ್ಲಿ ಒಟ್ಟು ಒಂದು ಸಾವಿರ ಹುದ್ದೆಗಳು ಖಾಲಿ ಇವೆ. 6 ಸಾವಿರ ವಿದ್ಯಾರ್ಥಿಗಳು ಇಲಾಖೆಯಡಿ ಕೌಶಲ್ಯ ತರಬೇತಿ ಪಡೆದು ಪೂರ್ಣಗೊಳಿಸಿದ್ದಾರೆ.

10 ತಿಂಗಳ ತರಬೇತಿಯಲ್ಲಿ ತೋಟಗಾರಿಕೆಗೆ ಸಂಬಂಧಿಸಿದಂತೆ ವಿವಿಧ ತೋಟಗಾರಿಕಾ ಬೆಳೆಗಳ ಪದ್ಧತಿಗಳು, ಸಸ್ಯ ಅಭಿವೃದ್ಧಿ ವಿಧಾನಗಳು, ಸಸ್ಯ ಸಂರಕ್ಷಣೆ ವಿಧಗಳು ಹಾಗೂ ಮಣ್ಣು ಮತ್ತು ನೀರು ಸಂರಕ್ಷಣೆ ಹಾಗೂ ನಿರ್ವಹಣೆ ಬಗ್ಗೆ ಪ್ರಾಯೋಗಿಕ ಹಾಗೂ ಕೌಶಲ್ಯದ ಬಗ್ಗೆ ತರಬೇತಿಯನ್ನು ಪಡೆದಿದ್ದೇವೆ ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ತೋಟಗಾರಿಕೆ ಇಲಾಖೆಯಡಿ 11 ತೋಟಗಾರಿಕಾ ತರಬೇತಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಎಸ್‍ಎಸ್‍ಎಲ್‍ಸಿ ವಿದ್ಯಾರ್ಹತೆ ಪಡೆದು ವ್ಯಾಸಂಗ ಮುಂದುವರೆಸದೆ ಗ್ರಾಮೀಣ ವಿದ್ಯಾರ್ಥಿಗಳನ್ನು ಜಿಲ್ಲಾವಾರು ನೇಮಕ ಮಾಡಿ 10 ತಿಂಗಳ ತೋಟಗಾರಿಕೆ ತರಬೇತಿಯನ್ನು ನೀಡುತ್ತಿವೆ. ವರ್ಷಕ್ಕೆ ಸುಮಾರು 350ರಿಂದ 400 ಗ್ರಾಮೀಣ ರೈತ ಯುವಕರು ತರಬೇತಿ ಪಡೆಯುತ್ತಿದ್ದಾರೆ. ಆದ್ದರಿಂದ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಬದಲು ತರಬೇತಿ ಪಡೆದ ನಿರುದ್ಯೋಗಿ ಯುವಕರನ್ನು ಖಾಯಂ ತೋಟಗಾರರನ್ನಾಗಿ ನೇಮಕ ಮಾಡಿ ನಿರುದ್ಯೋಗಿ ಗ್ರಾಮೀಣ ಯುವಕರಿಗೆ ಉದ್ಯೋಗ ಅವಕಾಶ ಕಲ್ಪಿಸಿಕೊಡಬೇಕೆಂದು ತರಬೇತಿ ವಿದ್ಯಾರ್ಥಿಗಳು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಸಿ.ಆರ್.ನವೀನ್‍ಕುಮಾರ್ ಮತ್ತಿತರರು ಇದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ