ಬೆಂಗಳೂರು:ಜೂ-8: ವಿಧಾನಪರಿಷತ್‌ನ ಆರು ಸ್ಥಾನಗಳಿಗೆ ಬಿರುಸಿನಿಂದ ಮತದಾನ ನಡೆಯುತ್ತಿದೆ. ಬೆಳಿಗ್ಗೆ 7ರಿಂದ ಮತ ಚಲಾವಣೆ ಪ್ರಕ್ರಿಯೆ ಆರಂಭವಾಗಿದ್ದು, ಪದವೀದರರು ಮತ ಚಲಾಯಿಸುತ್ತಿದ್ದಾರೆ. ಸಂಜೆ 5ರ ವರೆಗೆ ಮತದಾನ ನಡೆಯಲಿದೆ.
ಹಾಲಿ ಸದಸ್ಯರಾಗಿರುವ ಜೆಡಿಎಸ್‌ನ ಮರಿತಿಬ್ಬೇಗೌಡ, ರಮೇಶ್‌ಬಾಬು ಮತ್ತು ಬಿಜೆಪಿಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಕಣದಲ್ಲಿದ್ದಾರೆ.
ಮಳೆ ಬರುವ ಸಾಧ್ಯತೆ ಹಿನ್ನೆಲೆಯಲ್ಲಿ ಮತದಾರರು ಆದಷ್ಟು ಬೇಗನೇ ಮತಗಟ್ಟೆಗೆ ತೆರಳಿ ಮತ ಚಲಾಯಿಸಬೇಕು ಎಂದು ಚುನಾವಣಾ ಆಯೋಗ ಮನವಿ ಮಾಡಿದೆ.
ತುಮಕೂರು: ಆಗ್ನೇಯ ಶಿಕ್ಷಕರ ಕ್ಷೇತ್ರ ಚುನಾವಣೆ ಮತದಾನ ಕ್ರಮೇಣ ಚುರುಕು ಪಡೆಯುತ್ತಿದೆ. ಬೆಳಿಗ್ಗೆ 11 ಗಂಟೆ ಹೊತ್ತಿಗೆ ಶೇ 22.76 ಮತದಾನ ಆಗಿದೆ.
ಗರಿಷ್ಠ ಮತದಾನ ಕುಣಿಗಲ್‌ನಲ್ಲಿ ಶೇ 40 ರಷ್ಟು ಆಗಿದೆ.
ಕೋಲಾರ : ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಜಿಲ್ಲೆ ವ್ಯಾಪ್ತಿಯಲ್ಲಿ ಬೆಳಿಗ್ಗೆ 11 ಗಂಟೆವರೆಗೆ ಶೇ 27.48ರಷ್ಟು ಮತದಾನವಾಗಿದೆ.
ಜಿಲ್ಲೆಯ ಆರು ಮತಗಟ್ಟೆಗಳಲ್ಲಿ ಸಮಯಕ್ಕೆ ಸರಿಯಾಗಿ ಬೆಳಿಗ್ಗೆ 7ಕ್ಕೆ ಮತದಾನ ಆರಂಭವಾಗಿದೆ. ಮೊದಲ ಎರಡು ತಾಸಿನಲ್ಲಿ ಮತದಾನ ನಿಧಾನ ಗತಿಯಲ್ಲಿ ಸಾಗಿತ್ತು. ಬೆಳಿಗ್ಗೆ 9ರವರೆಗೆ ಶೇ 8.46ರಷ್ಟು ಮತದಾನವಾಗಿತ್ತು. ಸಮಯ ಕಳೆದಂತೆ ಮತದಾರರು ಗುಂಪು ಗುಂಪಾಗಿ ಮತಗಟ್ಟೆಗಳತ್ತ ಬರುತ್ತಿದ್ದು, ಮತದಾನ ಚುರುಕುಗೊಂಡಿದೆ.
ಜಿಲ್ಲೆಯಲ್ಲಿ 2,018 ಮಂದಿ ಪುರುಷ ಮತ್ತು 1,385 ಮಂದಿ ಮಹಿಳಾ ಮತದಾರರು ಸೇರಿದಂತೆ 3,403 ಮತದಾರರಿದ್ದು, ಈವರೆಗೆ 935 ಮತ ಚಲಾವಣೆಯಾಗಿವೆ.
ಹೊಸಪೇಟೆ: ಈಶಾನ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಬಿ.ಶ್ರೀನಿವಾಸ ರೆಡ್ಡಿ ಅವರು ಇಲ್ಲಿನ ತಾಲ್ಲೂಕು ಕಚೇರಿಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.
ಅವರ ಪತ್ನಿ, ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ರಾಣಿ ಸಂಯುಕ್ತಾ, ತಾಲ್ಲೂಕು ಅಧ್ಯಕ್ಷ ಅನಂತ ಪದ್ಮನಾಭ, ಮುಖಂಡರಾದ ಕವಿರಾಜ ಅರಸ್, ಬಸವರಾಜ ನಾಲತ್ಬಾಡ ಸಾಥ್ ನೀಡಿದರು.
ಚಿಕ್ಕಮಗಳೂರು: ನಗರದ ಬೇಲೂರು ರಸ್ತೆಯ ಸರ್ಕಾರಿ ಪಿಯು ಕಾಲೇಜಿನಲ್ಲಿ ವಿಧಾನಪರಿಷತ್ ನೈರುತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಮತದಾನ ನಡೆಯುತ್ತಿದೆ.
ಶಾಸಕ ಸಿ.ಟಿ. ರವಿ, ನೈರುತ್ಯ ಶಿಕ್ಷಕರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಸ್.ಎಲ್.ಭೋಜೇಗೌಡ ಮತ ಚಲಾಯಿಸಿದರು.
ಬಳ್ಳಾರಿ: ನಗರದಲ್ಲಿ ಬಾಲಭಾರತಿ ಶಾಲೆಯ ಮತಗಟ್ಟೆ, ತಾಲ್ಲೂಕು ಕಚೇರಿ ಆವರಣದ ಮತಗಟ್ಟೆ, ಸರಳಾದೇವಿ ಕಾಲೇಜಿನಲ್ಲಿ ಮತ ಚಲಾವಣೆ ನಡೆಯುತ್ತಿದ್ದು, ಮತದಾನರರು ಸರದಿಯಲ್ಲಿ ನಿಂತು ಹಕ್ಕು ಚಲಾಯಿಸುತ್ತಿದ್ದಾರೆ.
ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಗೆ ಬಳ್ಳಾರಿ ಜಿಲ್ಲೆಯಲ್ಲಿ ಬೆಳಿಗ್ಗೆ 9ಕ್ಕೆ ಶೇ 5.16 ಮತದಾನವಾಗಿದೆ. ಜಿಲ್ಲೆಯಲ್ಲಿ ಒಟ್ಟು ಮತದಾರರ ಸಂಖ್ಯೆ 20737.
ಕಲಬುರ್ಗಿ: ಈಶಾನ್ಯ ಪದವೀಧರ ಮತಕ್ಷೇತ್ರದ ಮತದಾನ ಪ್ರಕ್ರಿಯೆ ಆರಂಭವಾಗಿದೆ. ನಗರದ ತಹಶಿಲ್ದಾರ ಕಚೇರಿಯಲ್ಲಿ ಸ್ಥಾಪಿಸಿರುವ ಮತಗಟ್ಟೆಯಲ್ಲಿ ಮತದಾರರು ಮತದಾನ ಮಾಡಿದರು. ನಗರದಲ್ಲಿ ಬೆಳಿಗ್ಗೆಯಿಂದ ಮೋಡ ಮುಸುಕಿದ ವಾತಾವರಣ ಇದೆ.
ವಿಧಾನ ಪರಿಷತ್ ನೈರುತ್ಯ ಶಿಕ್ಷಕ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮಂಗಳೂರಿನ ಹಂಪನಕಟ್ಟೆ ವಿಶ್ವವಿದ್ಯಾಲಯ ಕಾಲೇಜಿನಲ್ಲಿ ತಮ್ಮ ಮತ ಚಲಾಯಿಸಿದರು.
ಆಗ್ನೇಯ ಶಿಕ್ಷಕರ ಕ್ಷೇತ್ರ ಚುನಾವಣೆ ಬಿಜೆಪಿ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿ ಅವರು ಶುಕ್ರವಾರ ತುಮಕೂರು ಸರ್ಕಾರಿ ಕಿರಿಯ ಕಾಲೇಜು ಮತಗಟ್ಟೆ ಎದುರು ಶಿಕ್ಷಕ ಮತದಾರರಿಗೆ ಮನವಿ ಮಾಡಿ ಮತಯಾಚಿಸಿದರು.
ದಕ್ಷಿಣ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್ ಮೈಸೂರಿನಲ್ಲಿ ಮತದಾನ ಮಾಡಿದರು.
ಮೈಸೂರು: ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಬೆಳಗ್ಗೆ 9ರ ವರೆಗೆ ಒಟ್ಟಾರೆ ಶೇಕಡ 5.31ರಷ್ಟು ಮತ ಚಲಾವಣೆಯಾಗಿವೆ. ಮೈಸೂರು ಜಿಲ್ಲೆಯ ಶೇಕಡವಾರು ಮತದಾನ 5.97ರಷ್ಟಾಗಿದೆ.
ಮೈಸೂರು ನಗರದಲ್ಲಿ 10 ಮತಗಟ್ಟೆ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 19 ಮತಗಟ್ಟೆ ಸ್ಥಾಪಿಸಲಾಗಿದೆ. ದಕ್ಷಿಣ ಶಿಕ್ಷಕರ ಕ್ಷೇತ್ರದ ವ್ಯಾಪ್ತಿಗೆ ಮೈಸೂರು, ಮಂಡ್ಯ, ಚಾಮರಾಜನಗರ ಮತ್ತು ಹಾಸನ ಜಿಲ್ಲೆಗಳು ಸೇರುತ್ತವೆ. ಒಟ್ಟು 20,678 ಮತದಾರರಿದ್ದಾರೆ.
ಆಗ್ನೇಯ ಶಿಕ್ಷಕರ ಕ್ಷೇತ್ರ ಚುನಾವಣೆ ಜೆಡಿಎಸ್ ಅಭ್ಯರ್ಥಿ ರಮೇಶ್ ಬಾಬು ಅವರು ಸರ್ಕಾರಿ ಕಿರಿಯ ಕಾಲೇಜಿನ ಮತಗಟ್ಟೆ ಎದುರು ಶಿಕ್ಷಕ ಮತದಾರರಿಗೆ ಜೆಡಿಎಸ್ ಮುಖಂಡರೊಂದಿಗೆ ಮತಯಾಚಿಸಿದರು.