ಅಲೋಟೆನನ್ಗೊ(ಗ್ವಾಟೆಮಾಲಾ) ಜೂ. 7- ಮಧ್ಯ ಅಮೆರಿಕದ ಗ್ವಾಟೆಮಾಲಾದಲ್ಲಿ ಜ್ವಾಲಾಮುಖಿ ಪ್ರಕೋಪ ಮುಂದುವರಿದಿದ್ದು, ಸತ್ತವರ ಸಂಖ್ಯೆ 112ಕ್ಕೇರಿದೆ. ಅಗ್ನಿಪರ್ವತದ ರುದ್ರತಾಂಡವಕ್ಕೆ ದೇಶದ ದಕ್ಷಿಣ ಭಾಗದ ಹಲವಾರು ಹಳ್ಳಿಗಳಲ್ಲೂ ನಾಮಾವಶೇಷವಾಗಿವೆ. 250ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದು, ನೂರಾರು ಮಂದಿ ತೀವ್ರ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.
3,763 ಮೀಟರ್ ಎತ್ತರದ ಜ್ವಾಲಾಮುಖಿ ಬೆಂಕಿ ಕಾರುತ್ತಲೇ ಇದ್ದು, ಇನ್ನಷ್ಟು ರೌದ್ರಾವತಾರ ತಾಳುವ ಭಯಭೀತ ವಾತಾವರಣ ನಿರ್ಮಾಣಗೊಂಡಿದೆ.
ವಾರದ ಹಿಂದೆ ಸ್ಪೋಟಗೊಂಡ ಜ್ವಾಲಾಮುಖಿ ಇನ್ನೂ ಸಕ್ರಿಯವಾಗಿದ್ದು, ಪರ್ವತ ತಪ್ಪಲಿನಲ್ಲಿರುವ ಕೆಲವು ಪುಟ್ಟ ಹಳ್ಳಿಗಳ ಗ್ರಾಮಸ್ಥರು ಕೆಂಡದ ಹೊಳೆಯ ಪ್ರದೇಶದಲ್ಲಿ ಈಗಲೂ ಸಿಲುಕಿದ್ದು ಅವರನ್ನು ರಕ್ಷಿಸುವ ಕಾರ್ಯ ಮುಂದುವರಿದಿದೆ. ಅತ್ಯಂತ ಸಕ್ರಿಯ ಅಗ್ನಿಪರ್ವತಗಳಲ್ಲಿ ಒಂದಾದ ಪ್ಯೂಗೊ ವಾಲ್ಕ್ಯಾನೋ ಸ್ಫೋಟಗೊಂಡು ಬೆಂಕಿ ಹೊಳೆ ಗ್ರಾಮಗಳತ್ತ ನುಗ್ಗಿ ಈವರೆಗೆ 112ಕ್ಕೂ ಹೆಚ್ಚು ಮಂದಿ ಮೃತಪಟ್ಟು, ನೂರಾರು ಜನರು ತೀವ್ರ ಗಾಯಗೊಂಡಿದ್ದಾರೆ ಎಂದು ಗ್ವಾಟೆಮಾಲದ ವಿಪತ್ತು ನಿರ್ವಹಣಾ ಸಂಸ್ಥೆ ಹೇಳಿದೆ.