ಬೆಂಗಳೂರು, ಜೂ.7- ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್‍ನ ಕಾರ್ಯಚಟುವಟಿಕೆ ಹಾಗೂ ಮೂಲಸೌಲಭ್ಯಗಳಿಗಾಗಿ 30 ಕೋಟಿ ರೂ. ಅನುದಾನ ಒದಗಿಸುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮನವಿ ಮಾಡಲಾಗಿದೆ.
ವಿಧಾನಸೌಧದಲ್ಲಿಂದು ಎಚ್.ಡಿ.ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್‍ನ ರಾಜ್ಯ ಶಾಖೆಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ ಮನವಿ ಮಾಡಿದ್ದಾರೆ.
ಸಾಹಸ ಚಟುವಟಿಕೆಗಳು, ಪೀಠೋಪಕರಣಗಳು ಸೇರಿದಂತೆ ಪ್ರತಿ ತರಬೇತಿ ಕೇಂದ್ರಕ್ಕೆ 10 ಕೋಟಿ ಅನುದಾನ ನೀಡುವಂತೆ ಅವರು ಮನವಿ ಮಾಡಿದರು.
ಸ್ಕೌಟ್ಸ್ ಆ್ಯಂಡ್ ಗೈಡ್ಸ್ ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದ ಮುಖ್ಯಮಂತ್ರಿ ಪಾರಿತೋಷಕ ನೀಡಬೇಕು. ಪ್ರತಿ ವರ್ಷ ಈ ಫಲಕ ನೀಡುವುದನ್ನು ಜಾರಿ ಗೊಳಿಸಬೇಕು. ಕರ್ನಾಟಕ ದರ್ಶನಕ್ಕಾಗಿ ನೀಡುವ ಅನುದಾನವನ್ನು 10 ಸಾವಿರ ವಿದ್ಯಾರ್ಥಿಗಳಿಂದ 15 ಸಾವಿರ ವಿದ್ಯಾರ್ಥಿಗಳಿಗೆ ಹೆಚ್ಚಿಸಬೇಕು. ಅಂತಾರಾಷ್ಟ್ರೀಯ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಸಮ್ಮೇಳನ ನಡೆಸುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಸಲಾಯಿತು.
ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಸೇರಿದಂತೆ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಸಂಸ್ಥೆಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.