ಕೇರಳ: ಆಂಬುಲೆನ್ಸ್‌ ಲಭ್ಯವಿಲ್ಲದೆ ಗರ್ಭಿಣಿಯನ್ನು ಜೋಲಿಯಲ್ಲಿ ಹೊತ್ತು ಆಸ್ಪತ್ರೆಗೆ ತೆರಳಿದ ಕುಟುಂಬಸ್ಥರು

ಅಟ್ಟಪ್ಪಾಡಿಗರ್ಭಿಣಿಯೊಬ್ಬರನ್ನು ಆಸ್ಪತ್ರೆಗೆ ಕರೆದೊಯ್ಯಲು ಆಂಬುಲೆನ್ಸ್‌ ಲಭ್ಯವಾಗದ ಕಾರಣಕ್ಕೆ ಜೋಲಿಯಲ್ಲಿರಿಸಿ ಹೆಗಲ ಮೇಲೆ ಹೊತ್ತು ಹೋಗಿರುವ ಘಟನೆ ಕೇರಳದಲ್ಲಿ ನಡೆದಿದೆ.

ಕೇರಳದ ಪಾಲ್ಗಾಟ್‌ನ ಅಟ್ಟಪ್ಪಾಡಿಯಲ್ಲಿ ಈ ಘಟನೆ ನಡೆದಿದೆ.

ಇಲ್ಲಿನ ಬುಡಕಟ್ಟು ಸಮುದಾಯದ 9ತಿಂಗಳ ತುಂಬು ಗರ್ಭಿಣಿಯೊಬ್ಬರನ್ನು ಆಸ್ಪತ್ರೆಗೆ ಕರೆದೊಯ್ಯಲು ಆಂಬುಲೆನ್ಸ್ ಲಭ್ಯವಾಗಿಲ್ಲ. ಈ ಕಾರಣಕ್ಕೆ ಅವರ ಕುಟುಂಬಸ್ಥರು ಮಹಿಳೆಯನ್ನು ಕಟ್ಟಿಗೆಗೆ ಬಟ್ಟೆಯನ್ನು ಕಟ್ಟಿ ಸಿದ್ಧಪಡಿಸಿದ ಜೋಲಿಯಲ್ಲಿರಿಸಿ ಹೊತ್ತು ಸಾಗಿದ್ದಾರೆ.

ಇಬ್ಬರು ಪುರುಷರು ಬಟ್ಟೆಯಿಂದ ಕಟ್ಟಿ ಮಾಡಿರುವ ಜೋಲಿಯನ್ನು ಹಿಂದೆ, ಮುಂದೆ ಹೆಗಲ ಮೇಲೆ ಹೊತ್ತು, ಕಲ್ಲು ಬಂಡೆಗಳ ಹಾದಿಯಲ್ಲಿ ನೀರು ಹರಿಯುತ್ತಿರುವ ಸ್ಥಳವನ್ನು ದಾಟುತ್ತಿರುವ ದೃಶ್ಯ ಚಿತ್ರದಲ್ಲಿದೆ. ಜತೆಗೆ ಇನ್ನೂ ಮೂವರು ಪುರುಷರು ಹಾಗೂ ಇಬ್ಬರು ಮಹಿಳೆಯರು ಇದ್ದಾರೆ. ಈ ಚಿತ್ರವನ್ನು ಎಎನ್ಐ ಟ್ವೀಟ್‌ ಮಾಡಿದೆ.

ಹರಸಾಹಸ ಮಾಡಿ ಮುಖ್ಯ ರಸ್ತೆಗೆ ಬಂದು ಆಸ್ಪತ್ರೆ ತಲುಪಿದ ಬಳಿಕ, ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ವರದಿಯಾಗಿದೆ.

ಕೆ.ಎ. ರಾಮು ಎಂಬುವರು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಈ ವಿಡಿಯೊವನ್ನು ಹಾಕಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ