
ಬೆಂಗಳೂರು, ಜೂ.7- ಅಪಘಾತದಲ್ಲಿ ಕೈ ಕಳೆದುಕೊಂಡಿರುವ ಮಹಿಳೆಯೊಬ್ಬರಿಗೆ ತಮ್ಮ ಕಚೇರಿಯಲ್ಲಿ ಉದ್ಯೋಗ ನೀಡುವ ಭರವಸೆಯನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೀಡಿದ್ದಾರೆ.
ಜೆ.ಪಿ.ನಗರದ ತಮ್ಮ ನಿವಾಸಕ್ಕೆ ಆಗಮಿಸಿದ್ದ ದಾವಣಗೆರೆ ಮೂಲದ ಶೈಲಾ ಎಂಬ ಮಹಿಳೆ ಉದ್ಯೋಗ ನೀಡುವಂತೆ ಮನವಿ ಮಾಡಿಕೊಂಡಿದ್ದರು. ಆಗ ತಮ್ಮ ಕಚೇರಿಯಲ್ಲೇ ಉದ್ಯೋಗ ನೀಡುವ ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿದರು.
ಚನ್ನಪಟ್ಟಣ ಮೂಲದ ಸಂಗೀತ ಎಂಬ ವಿದ್ಯಾರ್ಥಿನಿ ವಿದ್ಯಾಭ್ಯಾಸಕ್ಕೆ ನೆರವು ಕೋರಿ ಮುಖ್ಯಮಂತ್ರಿಗಳ ಬಳಿ ಬಂದಾಗ ಎಂಜನಿಯರಿಂಗ್ ಕೋರ್ಸ್ಗೆ ದಾಖಲಾಗಲು ಒಂದು ಲಕ್ಷ ರೂ. ಚೆಕ್ಕನ್ನು ಸಿಎಂ ನೀಡಿದರು.
ಮುಖ್ಯಕಾರ್ಯದರ್ಶಿ ಮತ್ತು ಸಿಎಂ ಚರ್ಚೆ:
ನಿನ್ನೆ ರಾಜಭವನದಲ್ಲಿ ನಡೆದ ಪ್ರಮಾಣವಚನ ಸ್ವೀಕಾರ ಸಮಾರಂಭ ಸಂದರ್ಭದಲ್ಲಿ ಉಂಟಾದ ಲೋಪದೋಷ ಹಾಗೂ ಸಂಚಾರ ದಟ್ಟಣೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಕೆ.ರತ್ನಪ್ರಭಾ ಅವರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದರು.
ವಿಧಾನಸಭಾಧ್ಯಕ್ಷ ರಮೇಶ್ಕುಮಾರ್ ಅವರು ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಬರಲು ಸಾಧ್ಯವಾಗದೆ ವಾಪಸಾಗಿರುವ ವಿಚಾರ, ಈ ಬಗ್ಗೆ ಪತ್ರ ಬರೆದಿರುವ ವಿಚಾರ ಕುರಿತಂತೆ ಮುಖ್ಯಮಂತ್ರಿಗಳೊಂದಿಗೆ ಮುಖ್ಯಕಾರ್ಯದರ್ಶಿ ಸಮಾಲೋಚನೆ ನಡೆಸಿದರು.