
ಮೈಸೂರು, ಜೂ.7- ಕೆಲ ದಿನಗಳಿಂದ ಗ್ರಾಮಸ್ಥರಲ್ಲಿ ಭೀತಿ ಹುಟ್ಟಿಸಿದ್ದ ಚಿರತೆಯೊಂದು ಬೋನಿಗೆ ಬಿದ್ದಿರುವುದರಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಮೈಸೂರು-ಟಿ.ನರಸೀಪುರ ರಸ್ತೆಯಲ್ಲಿರುವ ಕೆಂಪಯ್ಯನ ಹುಂಡಿ ಗ್ರಾಮದಲ್ಲಿ ಹಲವು ದಿನಗಳಿಂದ ಆಗಾಗ ಕಾಣಿಸಿಕೊಳ್ಳುತ್ತಿದ್ದ ಚಿರತೆ ನಾಯಿ,ಹಸುಗಳ ಮೇಲೆ ದಾಳಿ ಮಾಡುತ್ತಿತ್ತು. ಇದರಿಂದ ಭಯಗೊಂಡ ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ಚಿರತೆ ಹಿಡಿಯಲು ಮನವಿ ಮಾಡಿದರು. ಗ್ರಾಮದ ಪೈಪ್ ಕಾರ್ಖಾನೆ ಬಳಿ ಅರಣ್ಯಾಧಿಕಾರಿಗಳು ಬೋನ್ ಇಟ್ಟಿದ್ದು , ಬೆಳಗಿನ ಜಾವ ಈ ಚಿರತೆ ಬೋನಿನೊಳಗೆ ಸಿಕ್ಕಿ ಬಿದ್ದಿದೆ. ನಂತರ ಅರಣ್ಯಾಧಿಕಾರಿಗಳು ಎಚ್.ಡಿ.ಕೋಟೆ ತಾಲ್ಲೂಕಿನ ನಾಗರಹೊಳೆ ಅರಣ್ಯದಲ್ಲಿ ಈ ಚಿರತೆಯನ್ನು ಬಿಡಲಾಯಿತು.