ತುಮಕೂರು, ಜೂ.5-ಜೆಡಿಎಸ್ ಪಕ್ಷವನ್ನು ಪುಟಗೋಸಿ ಪಕ್ಷ ಎಂದು ಅವಹೇಳನವಾಗಿ ಮಾತನಾಡಿರುವ ಕೇಂದ್ರ ಸಚಿವ ಅನಂತ್ಕುಮಾರ್ ಹೆಗಡೆ ತಮ್ಮ ಮಾತನ್ನು ವಾಪಸ್ ಪಡೆಯದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಮಾಜಿ ಸಚಿವ ಚೆನ್ನಿಗಪ್ಪ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನಂತ್ಕುಮಾರ್ ಹೆಗಡೆ ಅವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಸಂವಿಧಾನಕ್ಕೆ ಮಾನ್ಯತೆ ನೀಡದೆ, ರಾಜಕೀಯ ಪಕ್ಷಗಳಿಗೆ ಆದ್ಯತೆ ನೀಡದೆ ಮನಬಂದಂತೆ ಮಾತನಾಡುವ ಅವರನ್ನು ಪ್ರಧಾನಿ ಮೋದಿಯವರು ಸಂಪುಟದಿಂದ ಕೈ ಬಿಡಬೇಕೆಂದು ಒತ್ತಾಯಿಸಿದರು.
ಕೇಂದ್ರ ಸಚಿವರಾದ ಇವರ ಬಾಯಿ ಭದ್ರವಿಲ್ಲ. ಇವರು ತಲೆ ಕೆಟ್ಟವರಂತೆ ಮಾತನಾಡುತ್ತಾರೆ. ಗಾಂಧೀಜಿಯವರು ಸ್ವಾತಂತ್ರ್ಯ ತಂದುಕೊಟ್ಟರು, ಅಂಬೇಡ್ಕರ್ ಸಂವಿಧಾನ ಬರೆದರು, ಅಂತಹ ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಅನಂತ್ಕುಮಾರ್ ಹೆಗಡೆ ಹೇಳುತ್ತಾರೆ. ಎಷ್ಟು ಅಧೀಕಾರವಿದೆಯೋ ಅಷ್ಟು ಮಾತನಾಡಬೇಕು. ಸಂವಿಧಾನ 125 ಕೋಟಿ ಜನರ ಕೈಯಲ್ಲಿದೆ. ಅದನ್ನು ಬದಲಿಸಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.
ಅನಂತ್ಕುಮಾರ್ ಹೆಗಡೆಯಂತೆ ಮಾಜಿ ಶಾಸಕ ಸುರೇಶ್ಗೌಡ ಅವರು ವರ್ತಿಸುತ್ತಿದ್ದಾರೆ. ತುಮಕೂರು ಗ್ರಾಮಾಂತರದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಜೆಡಿಎಸ್ ಕಾರ್ಯಕರ್ತರು ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಅನಗತ್ಯ ಆರೋಪ ಮಾಡಿದ್ದಾರೆ. ಅಂತಹ ಯಾವುದೇ ದೌರ್ಜನ್ಯ ನಾವು ಮಾಡಿಲ್ಲ ಎಂದು ಹೇಳಿದರು. ರಾಜ್ಯದಲ್ಲಿ ದೇವರ ಆಶೀರ್ವಾದದಿಂದ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್ ಸಹಭಾಗಿತ್ವದಲ್ಲಿ ಮೈತ್ರಿ ಸರ್ಕಾರ ರಚನೆಯಾಗಿದ್ದು, ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾರೆ. ಅನೇಕ ಮಂದಿ ಅನೇಕ ರೀತಿ ವ್ಯಾಖ್ಯಾನ ನೀಡುತ್ತಿದ್ದಾರೆ. ಕುಮಾರಸ್ವಾಮಿಯವರಿಗೆ ರಾಜ್ಯದ ಅಭಿವೃದ್ಧಿ ಮುಖ್ಯ. ರೈತರ, ಬಡವರ, ಕೂಲಿಕಾರ್ಮಿಕರ, ಹೆಣ್ಣು ಮಕ್ಕಳ, ವೃದ್ಧರ ಕಲ್ಯಾಣ ಮಾಡುವುದು ಅವರ ಗುರಿಯಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯವನ್ನು ಅಭಿವೃದ್ಧಿ ಮಾಡುವುದು ಅವರ ಉದ್ದೇಶ. ಅವರಿಗೆ ಕಾಲಾವಕಾಶ ನೀಡಬೇಕು ಎಂದರು.
ಬಿಜೆಪಿ ಯವರು ಕೇವಲ ಆರೋಪ ಮಾಡುವುದರಲ್ಲೇ ಕಾಲಹರಣ ಮಾಡುತ್ತಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಜನ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.