ಚಿಕ್ಕಬಳ್ಳಾಪುರ: ಈಗಾಗಲೇ ಮಾರುಕಟ್ಟೆಯಲ್ಲಿ ಮಾವು, ದ್ರಾಕ್ಷಿ ಮತ್ತಿತರ ವಾಣಿಜ್ಯ ಬೆಳೆಗಳ ಬೆಲೆ ಕುಸಿತಗೊಂಡು ಜಿಲ್ಲೆಯ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿರುವ ಸಂದರ್ಭದಲ್ಲಿ ಚಿಕ್ಕಬಳ್ಳಾಪುರದ ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ ಪಾತಾಳಕ್ಕೆ ಕುಸಿದಿರುವುದು ರೈತರನ್ನು ಕಂಗಾಲಾಗಿಸಿದೆ.
ಕಳೆದೊಂದು ವಾರದಿಂದ ಜಿಲ್ಲೆಯ ಮಾರುಕಟ್ಟೆಯಲ್ಲಿ ಬೆಲೆ ತೀವ್ರ ಇಳಿಮುಖವಾಗಿ 15 ಕೆಜಿ ಟೊಮೆಟೊ ಬಾಕ್ಸ್ 30 ರಿಂದ 40 ರೂ.ಗೆ ಮಾರಾಟಗೊಳ್ಳುತ್ತಿದೆ. ಅಂದರೆ ಕೆಜಿಗೆ 2 ರೂ.ಗಳಿಂದ 3 ರೂ.ವರೆಗೆ ಮಾರಾಟವಾಗುತ್ತಿದೆ.ಸಾಮಾನ್ಯವಾಗಿ ಮಳೆಗಾಲದಲ್ಲಿ ಟೊಮೆಟೊ ಬೆಳೆ ಫಸಲು ಸಮರ್ಪಕವಾಗಿ ಬರುತ್ತಿರಲಿಲ್ಲ. ಬಂದರೂ ಮಳೆಯ ಅವಾಂತರಕ್ಕೆ ಸಿಲುಕಿ ಮಾರುಕಟ್ಟೆಗೆ ನಿರೀಕ್ಷಿತ ಪ್ರಮಾಣದಲ್ಲಿ ಅವಕ ಬಾರದೇ ಬೆಲೆ ಗಗನಮುಖೀಯಾಗಿರುತ್ತಿತ್ತು. ಆದರೆ ಈ ಬಾರಿ ಟೊಮೆಟೊ ತೋಟಗಳ ಮೇಲೆ ಹೆಚ್ಚು ಮಳೆ ಪ್ರಭಾವ ಬೀರದ ಕಾರಣ ಹಾಗೂ ಉತ್ತರ ಭಾರತದ ವಿವಿಧ ರಾಜ್ಯಗಳಲ್ಲಿಯೂ ನಿರೀಕ್ಷೆಗೂ ಮೀರಿ ಮಾರುಕಟ್ಟೆಗೆ ಟೊಮೆಟೊ ಬರುತ್ತಿರುವುದರಿಂದ ಬೇಡಿಕೆ ಕುಸಿದಿದೆ.
ಅವಿಭಜಿತ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ ರೈತರ ಪಾಲಿಗೆ ಪ್ರಮುಖ್ಯ ವಾಣಿಜ್ಯ ಬೆಳೆಯಾಗಿರುವ ಟೊಮೆಟೊ ಒಂದು ರೀತಿ ಬಂಪರ್ ಲಾಟರಿ ಇದ್ದಂತೆ. ಮಾರುಕಟ್ಟೆಯಲ್ಲಿ ಬೆಲೆ ಸಿಕ್ಕರೆ ಅಂತೂ ಬೆಳೆಗಾರರು ಲಕ್ಷಗಟ್ಟಲೇ ಹಣವನ್ನು ಒಂದೆರೆಡು ತಿಂಗಳಲ್ಲಿ ಸಂಪಾದಿಸುತ್ತಾರೆ. ಮಾರುಕಟ್ಟೆಯಲ್ಲಿ ಬೆಲೆ ಏನಾದರೂ ಕೈ ಕೊಟ್ಟರೆ ಲಕ್ಷಾಂತರ ರೂ, ಲಾಸು ಮಾಡಿಕೊಂಡು ಕೈ ಸುಟ್ಟುಕೊಳ್ಳುವುದು ಸಾಮಾನ್ಯ. ಆದರೀಗ ಹಾಕಿದ ಬಂಡವಾಳವೂ ಬರುವುದಿಲ್ಲವೆಂಬ ಆತಂಕ ಶುರುವಾಗಿದೆ.