ನವದೆಹಲಿ, ಜೂ.5-ಮಾಜಿ ಮುಖ್ಯಮಂತ್ರಿ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರೂ ಆದ ಸಿದ್ದರಾಮಯ್ಯ ತಮ್ಮ ಪುತ್ರ ಯತೀಂದ್ರ ಪರ ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸಿದ್ದಾರೆ.
ವರುಣ ಕ್ಷೇತ್ರದ ಶಾಸಕರಾದ ಯತೀಂದರ ಅವರನ್ನು ಸಂಪುಟಕ್ಕೆ ಸೇರಿಸಲು ಹೈಕಮಾಂಡ್ ಮೇಲೆ ಒತ್ತಡ ತಂದಿದ್ದಾರೆ ಎನ್ನಲಾಗಿದೆ.
ಜಿ.ಟಿ.ದೇವೇಗೌಡ, ಎಚ್.ವಿಶ್ವನಾಥ್ ಅವರು ಮೈಸೂರಿನ ಮೇಲೆ ಹಿಡಿತ ಸಾಧಿಸಲು ಮುಂದಾಗಿರುವ ಹಿನ್ನೆಲೆಯಲ್ಲಿ ತಮ್ಮ ಪುತ್ರನನ್ನು ಸಚಿವನನ್ನಾಗಿ ಮಾಡುವ ಬೇಡಿಕೆಯನ್ನು ಹೈಕಮಾಂಡ್ ಮುಂದೆ ಇಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಆದರೆ ಮಾಡುವುದು, ಬಿಡುವುದು ತಮ್ಮ ವಿವೇಚನೆಗೆ ಬಿಟ್ಟಿದ್ದು. ನನ್ನ ಆಗ್ರಹವೇನಿಲ್ಲ ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಹೇಳಿದ್ದಾರೆ.
ಸಿದ್ದರಾಮಯ್ಯನವರು ಮಾಜಿ ಮುಖ್ಯಮಂತ್ರಿಗಳು. ಯಶಸ್ವಿಯಾಗಿ ಐದು ವರ್ಷ ಆಡಳಿತ ನಡೆಸಿದವರು, ಸಮನ್ವಯ ಸಮಿತಿ ಅಧ್ಯಕ್ಷರು. ಅವರ ಶಿಫಾರಸ್ಸಿನಂತೆ ಅವರ ಪುತ್ರನಿಗೆ ಹೈಕಮಾಂಡ್ ಸಚಿವ ಸ್ಥಾನ ನೀಡಲಿದೆಯೇ ಕಾದು ನೋಡಬೇಕು.
ಈಗಾಗಲೇ ಖರ್ಗೆ ಪುತ್ರ ಪ್ರಿಯಾಂಕ ಖರ್ಗೆ, ಧರ್ಮಸಿಂಗ್ ಪುತ್ರ ಅಜಯ್ಸಿಂಗ್, ಸಂಸದ ಕೆ.ಎಚ್.ಮುನಿಯಪ್ಪ ಪುತ್ರಿ ರೂಪಾಶಶಿಧರ್ ಅವರು ಕೂಡ ಸಚಿವ ಸ್ಥಾನಕ್ಕೆ ಲಾಬಿ ನಡೆಸಿದ್ದಾರೆ. ಹೈಕಮಾಂಡ್ ಯಾರನ್ನು ಪರಿಗಣಿಸುತ್ತದೆ ಎಂಬುದು ಇಂದು ಸಂಜೆಯೊಳಗೆ ಗೊತ್ತಾಗಲಿದೆ.