ಮಳೆ ನೀರು ಮತ್ತು ಚರಂಡಿ ನೀರು ಹರಿಯಲು ಪ್ರತ್ಯೇಕ ವ್ಯವಸ್ಥೆ ಮಾಡಿಕೊಳ್ಳುವಂತೆ ಮೈಸೂರು ಮಹಾನಗರ ಪಾಲಿಕೆ ನಗರದ ಜನತೆಗೆ ಸೂಚನೆ

ಮೈಸೂರು, ಜೂ.5- ಮಳೆ ನೀರು ಮತ್ತು ಚರಂಡಿ ನೀರು ಹರಿಯಲು ಪ್ರತ್ಯೇಕ ವ್ಯವಸ್ಥೆ ಮಾಡಿಕೊಳ್ಳುವಂತೆ ಮೈಸೂರು ಮಹಾನಗರ ಪಾಲಿಕೆ ನಗರದ ಜನತೆಗೆ ಸೂಚನೆ ನೀಡಿದೆ.
ನಗರದ ಬಹುತೇಕ ಜನರು ಮನೆಯ ಚಾವಣಿಯಲ್ಲಿ ಸಂಗ್ರಹವಾಗುವ ಮಳೆ ನೀರನ್ನು ನೇರವಾಗಿ ಒಳಚರಂಡಿಗೆ ಸಂಪರ್ಕ ಕಲ್ಪಿಸಿರುವುದರಿಂದ ಎಲ್ಲ ಚರಂಡಿಗಳು ಉಕ್ಕಿ ಹರಿಯುತ್ತಿವೆ ಹಾಗೂ ಮಲಿನ ನೀರು ರಸ್ತೆಗೆ ಬಂದು ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಜತೆಗೆ ನೀರು ಪೆÇೀಲಾಗುತ್ತಿದೆ. ಹಾಗಾಗಿ ಮಳೆ ನೀರು, ಚರಂಡಿ ನೀರುಹರಿಯಲು ಪ್ರತ್ಯೇಕ ವ್ಯವಸ್ಥೆ ಮಾಡಿಕೊಳ್ಳಬೇಕೆಂದು ಪಾಲಿಕೆ ಹೇಳಿದೆ.
ಶೌಚಾಲಯಗಳ ನೀರು ಹರಿದು ಹೋಗಲು ಮಾತ್ರ ಒಳಚರಂಡಿಗಳನ್ನು ವಿನ್ಯಾಸಗೊಳಿಸಲಾಗಿದೆ. ಸಾರ್ವಜನಿಕರು ತಮ್ಮ ಮನೆಯ ಮಳೆಯ ನೀರಿನ ಹರಿಯವಿಕೆಯ ಕೊಳವೆಗಳನ್ನು ಒಳಚರಂಡಿ ಕೊಳವೆಗಳಿಗೆ ಸಂಪರ್ಕಗೊಳಿಸಿದ್ದಲ್ಲಿ ಕೂಡಲೇ ತೆರವುಗೊಳಿಸಬೇಕು. ಮನೆಯ ಮಾಳಿಗೆಯ ಮಳೆ ನೀರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಿಕೊಳ್ಳಬೇಕು ಎಂದು ಮಹಾನಗರ ಪಾಲಿಕೆ ಒಳ ಚರಂಡಿ ವಿಭಾಗದ ಕಾರ್ಯಪಾಲಕ ಅಭಿಯಂತರರು ಸೂಚಿಸಿದ್ದಾರೆ.
ಕೋಳಿ ಮಾಂಸದ ಅಂಗಡಿಗಳಿಂದ ಉತ್ಪತ್ತಿಯಾಗುವ ತ್ಯಾಜ್ಯ, ಹಾಸ್ಟೆಲ್ ಹಾಗೂ ವಸತಿ ಗೃಹಗಳಿಂದ ಉತ್ಪತ್ತಿಯಾಗುವ ತ್ಯಾಜ್ಯ ಮತ್ತು ಹಳೆ ಬಟ್ಟೆ, ಪ್ಲ್ಯಾಸ್ಟಿಕ್ ಚೀಲಗಳನ್ನು ಸಹಾ ಒಳಚರಂಡಿ ಪಿಟ್‍ಗಳಿಗೆ ಹಾಕುತ್ತಿರುವುದರಿಂದ ಒಳಚರಂಡಿ ಕಟ್ಟಿಕೊಳ್ಳುತ್ತಿವೆ. ಹಾಗಾಗಿ ಈ ಬಗ್ಗೆ ಸಾರ್ವಜನಿಕರು ಎಚ್ಚರ ವಹಿಸಬೇಕು ಎಂದು ಹೇಳಿದ್ದಾರೆ. ಮಹಿಳೆಯರ ಹಾಸ್ಟೆಲ್‍ಗಳಲ್ಲಿ ಎಲೆಕ್ಟ್ರಿಕಲ್ ಸ್ಯಾನಿಟರಿ ನ್ಯಾಪ್‍ಕಿನ್ ಅಳವಡಿಸಿಕೊಳ್ಳುವಂತೆ ಆಯುಕ್ತರು ಸೂಚಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ