ಮೈಸೂರು, ಜೂ.5-ವರುಣನಿಗೆ ಸೆಡ್ಡು ಹೊಡೆಯಲು ಮೈಸೂರು ನಗರ ಪಾಲಿಕೆ ಸಜ್ಜಾಗಿದೆ.
ಮುಂದಿನ ದಿನಗಳಲ್ಲಿ ವರುಣನ ಆರ್ಭಟಕ್ಕೆ ಜನ ಅಂಜುವ ಅವಶ್ಯಕತೆ ಇಲ್ಲ. ಕಾರಣ ಮೈಸೂರು ಮಹಾನಗರ ಪಾಲಿಕೆ ಎಲ್ಲಾ ರೀತಿಯಲ್ಲೂ ಸಜ್ಜಾಗಿ ಜನ, ಜಾನುವಾರು, ಆಸ್ತಿ ರಕ್ಷಣೆ ಮಾಡಲು ಪೂರ್ವ ತಯಾರಿ ಮಾಡಿಕೊಂಡಿದ್ದು, ಎಲ್ಲೇ ವರುಣನ ಆರ್ಭಟದಿಂದ ಸಮಸ್ಯೆ ಉಂಟಾದರೆ ತಕ್ಷಣ ಪರಿಹಾರ ಕಂಡುಕೊಳ್ಳಲು ನಾವು ಸಿದ್ದರಿದ್ದೇವೆ ಎಂದು ಪಾಲಿಕೆ ಆಯುಕ್ತ ಜಗದೀಶ್ ನಗರದ ಜನರಿಗೆ ಅಭಯ ನೀಡಿದ್ದಾರೆ.
ನಗರದಲ್ಲಿರುವ ವಯಸ್ಸಾದ ಮರಗಳನ್ನು ತೆರವುಗೊಳಿಸಲು ಪಾಲಿಕೆ ಈಗಾಗಲೇ ಕ್ರಮ ಕೈಗೊಂಡಿದೆ. ಅದರೊಂದಿಗೆ ಪಾಲಿಕೆ ಸಿಬ್ಬಂದಿ ರಾತ್ರಿ ವೇಳೆಯಲ್ಲೂ ಸಹ ಮಳೆಯಿಂದ ಉಂಟಾಗಬಹುದಾದ ಸಮಸ್ಯೆ ಪರಿಹಾರಕ್ಕೆ ಸರ್ವ ರೀತಿಯಲ್ಲೂ ಸನ್ನದ್ಧರಾಗಿದ್ದು, ರೈನ್ಕೋಟ್, ಮಾಸ್ಕ್, ಗಮ್ ಬೂಟ್, ಟಾರ್ಚ್ ವಿತ್ ಹೆಲ್ಮೆಟ್ಗಳನ್ನು ಸಿಬ್ಬಂದಿಗೆ ಒದಗಿಸಲಾಗಿದೆ.
ಸಿಬ್ಬಂದಿ ನಾವು ಸಾರ್ವಜನಿಕರ ಯಾವುದೇ ಸಮಸ್ಯೆಗೆ ಸ್ಪಂದಿಸಲು ಸಿದ್ದ ಎಂದಿದ್ದಾರೆ.
ಈ ಹಿಂದೆ ಮಳೆಗಾಲ ಆರಂಭವಾದ ನಂತರ ಮೋರಿ ಸ್ವಚ್ಛತೆ ಸೇರಿದಂತೆ ಇನ್ನಿತರೆ ಮಳೆಗಾಲದ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುತ್ತಿದ್ದರು. ಆದರೆ, ಈಗಿನ ಆಯುಕ್ತರು ಮಳೆ ಆರಂಭಕ್ಕೂ ಮುನ್ನವೇ ಮೈಸೂರು ನಗರದಾದ್ಯಂತ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಂಡಿರುವುದಕ್ಕೆ ಸಾರ್ವಜನಿಕರು ಶ್ಲಾಘಿಸಿದ್ದಾರೆ.