ಬೆಂಗಳೂರು, ಜೂ.5- ಸೂಪರ್ ಸ್ಟಾರ್ ರಜನಿಕಾಂತ್ ನಟಿಸಿರುವ ಕಾಲ ಚಿತ್ರವನ್ನು ಕನ್ನಡನಾಡಿನಲ್ಲಿ ಬಿಡುಗಡೆ ಮಾಡದಿರುವುದೇ ಸೂಕ್ತ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಗೃಹ ಕಚೇರಿ ಕೃಷ್ಣದಲ್ಲಿ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು, ಕರವೇ ಅಧ್ಯಕ್ಷ ಪ್ರವೀಣ್ ಶೆಟ್ಟಿ ನೇತೃತ್ವದ ನಿಯೋಗದ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಲ ಬಿಡುಗಡೆಗೆ ರಕ್ಷಣೆ ನೀಡುವಂತೆ ಹೈಕೋರ್ಟ್ ನೀಡಿರುವ ತೀರ್ಪನ್ನು ಸರ್ಕಾರ ಗೌರವಿಸಲಿದೆ. ಅಗತ್ಯವಾದ ರಕ್ಷಣೆಯನ್ನೂ ನೀಡಲಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ನ್ಯಾಯಾಲಯಕ್ಕೆ ಗೌರವ ನೀಡುವುದು ಸರ್ಕಾರದ ಕರ್ತವ್ಯ ಅದನ್ನು ನಾವು ಪಾಲಿಸುತ್ತೇವೆ, ನ್ಯಾಯಾಲಯದ ತೀರ್ಪು ಒಂದು ಭಾಗ. ಆದರೆ ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ ಕಾಲ ಚಿತ್ರವನ್ನು ಕರ್ನಾಟದಲ್ಲಿ ಬಿಡುಗಡೆ ಮಾಡದಿರುವುದೇ ಸೂಕ್ತ ಎಂದರು.
2016ರಲ್ಲಿ ನಾಗರಹಾವು ಎಂಬ ಚಿತ್ರ ಎಲ್ಲಾ ಭಾಷೆಗಳಲ್ಲಿ ತಯಾರಾಗಿತ್ತು. ತಮಿಳು ಭಾಷೆಯಲ್ಲಿ ಡಬ್ ಆಗಿದ್ದ ಚಿತ್ರ ಚೆನೈನ 15 ಚಿತ್ರ ಮಂದಿಗಳಲ್ಲಿ ಬಿಡುಗಡೆಯಾಗಿತ್ತು. ಆಗ ಕಾವೇರಿ ನದಿ ನೀರಿನ ಗಲಾಟೆ ಆರಂಭವಾಯಿತು ಎಂಬ ಕಾರಣಕ್ಕೆ ಪೊಲೀಸರು, ಪೊಲೀಸ್ ಆಯುಕ್ತರೆ ಮುಂದೆ ನಿಂತು ನಾಗರಹಾವು ಚಿತ್ರವನ್ನು ತೆಗೆದು ಹಾಕಿದರು. ಇಲ್ಲಿ ಕನ್ನಡ ಸಂಘಟನೆಗಳು ಪ್ರಬಲ ವಿರೋಧ ವ್ಯಕ್ತ ಪಡಿಸಿದ್ದಾರೆ. ಅದರ ವಿರುದ್ಧವಾಗಿ ಚಿತ್ರ ಬಿಡುಗಡೆ ಮಾಡಲೇ ಬೇಕು ಎಂಬ ಹಠ ಏಕೆ ಎಂದು ಹೇಳಿದರು.
ಸರ್ಕಾರ ರಕ್ಷಣೆ ನೀಡಿದರು ಕನ್ನಡ ಸಂಘಟನೆಗಳ ಪ್ರತಿಭಟನೆಗೆ ಹೆದರಿ ಜನ ಚಿತ್ರಮಂದಿರಗಳಿಗೆ ಬರದೆ, ನಿರ್ಮಾಪಕರ ನಿರೀಕ್ಷೆಗೆ ತಕ್ಕಂತೆ ಯಶಸ್ವಿಯಾಗದೆ ಇದ್ದರೆ ಏನು ಪ್ರಯೋಜನ. ನಾವು ರಕ್ಷಣೆ ಕೊಡುತ್ತೇವೆ. ಆದರೆ ಜನ ಚಿತ್ರಮಂದಿರಗಳಿಗೆ ಬರದಿರುವ ಸಾಧ್ಯತೆ ಇದೆ. ಸಂಬಂಧ ಪಟ್ಟವರು ಈ ವಿಷಯವನ್ನು ಗಣನೆಗೆ ತೆಗೆದುಕೊಳ್ಳಲಿ. ನಾನು ಮುಖ್ಯಮಂತ್ರಿಯಾಗಿ ಮಾತು ಹೇಳುತ್ತಿಲ್ಲ. ಸಾಮಾನ್ಯ ಕನ್ನಡಿಗನಾಗಿ ಸಲಹೆ ನೀಡುತ್ತಿದ್ದೇನೆ. ನಿರ್ಮಾಪಕನಾಗಿ, ಹಂಚಿಕೆದಾರನಾಗಿ ನನಗೆ ಎಲ್ಲವೂ ಗೋತ್ತಿದೆ. ಚಿತ್ರ ಬಿಡುಗಡೆ ಮಾಡಲೇಬೇಕು ಎಂಬ ಹಠ ಬೇಡ. ಒಂದು ವೇಳೆ ಬಿಡುಗಡೆ ಮಾಡಿದ ನಂತರ ಎದುರಾಗುವ ಬೇರೆ ರೀತಿಯ ಪರಿಣಾಮಗಳಿಗೆ ಚಿತ್ರ ನಿರ್ಮಾಪಕರೆ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಹೈಕೋರ್ಟ್ ನೀಡಿರುವ ಆದೇಶ ಈವರೆಗೂ ನನಗೆ ತಲುಪಿಲ್ಲ. ಅದು ಬಂದ ನಂತರ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.