ಅಮೆರಿಕದ ಗ್ವಾಟೆಮಾಲಾದಲ್ಲಿ ಜ್ವಾಲಾಮುಖಿ ರೌದ್ರಾವತಾರದಿಂದ ಸತ್ತವರ ಸಂಖ್ಯೆ 69ಕ್ಕೇರಿದೆ

ಎಲ್ ರೋಡಿಯೋ(ಗ್ವಾಟೆಮಾಲಾ) ಜೂ. 4-ಮಧ್ಯ ಅಮೆರಿಕದ ಗ್ವಾಟೆಮಾಲಾದಲ್ಲಿ ಜ್ವಾಲಾಮುಖಿ ರೌದ್ರಾವತಾರದಿಂದ ಸತ್ತವರ ಸಂಖ್ಯೆ 69ಕ್ಕೇರಿದೆ. ಪರ್ವತ ತಪ್ಪಲಿನಲ್ಲಿರುವ ಕೆಲವು ಪುಟ್ಟ ಹಳ್ಳಿಗಳ ಗ್ರಾಮಸ್ಥರು ಕೆಂಡದ ಹೊಳೆಯ ಪ್ರದೇಶದಲ್ಲಿ ಸಿಲುಕಿದ್ದು ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.
ಅತ್ಯಂತ ಸಕ್ರಿಯ ಅಗ್ನಿಪರ್ವತಗಳಲ್ಲಿ ಒಂದಾದ ಪ್ಯೂಗೊ ವಾಲ್ಕ್ಯಾನೋ ಸ್ಫೋಟಗೊಂಡು ಬೆಂಕಿ ಹೊಳೆ ಗ್ರಾಮಗಳತ್ತ ನುಗ್ಗಿ ಈವರೆಗೆ 69 ಮಂದಿ ಮೃತಪಟ್ಟು, ನೂರಾರು ಜನರು ತೀವ್ರ ಗಾಯಗೊಂಡಿದ್ದಾರೆ ಎಂದು ಗ್ವಾಟೆಮಾಲದ ವಿಪತ್ತು ನಿರ್ವಹಣಾ ಸಂಸ್ಥೆ ಹೇಳಿದೆ.
ರಾಜಧಾನಿ ಗ್ವಾಟೆಮಾಲಾ ಸಿಟಿ ಮತ್ತು ಸುತ್ತಮುತ್ತಲ ಪ್ರಾಂತ್ಯಗಳ ಗ್ರಾಮಗಳಲ್ಲಿ ಲಾವಾರಸ ನದಿಯಂತೆ ಹರಿಯುತ್ತಿದ್ದು, ದಟ್ಟ ಬಿಸಿ ಹೊಗೆ ಆವರಿಸಿದೆ. ಜಾಲ್ವಾಮುಖಿಯ ರೌದ್ರಾವತಾರದಲ್ಲಿ ಸುಟ್ಟು ಕರಕಲಾಗಿರುವ ಮೃತದೇಹಗಳು ಪತ್ತೆಯಾಗುತ್ತಿವೆ.
ಲೆಕ್ಕವಿಲ್ಲದಷ್ಟು ಮಂದಿ ತೀವ್ರ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಸ್ಫೋಟಗೊಂಡ ಅಗ್ನಿಪರ್ವತದ ತಪ್ಪಲಿನಲ್ಲಿರುವ ಕೆಲವು ತಾಂಡಾಗಳು ಲಾವಾ ಹೊಳೆಯಿಂದ ಸುತ್ತುವರೆದಿದ್ದು, ಗ್ರಾಮಸ್ಥರು ಸುರಕ್ಷಿತವಾಗಿ ಪಾರಾಗಲು ಸಾಧ್ಯವಾಗುತ್ತಿಲ್ಲ. ಅವರನ್ನು ರಕ್ಷಿಸಲು ವಿಫಲ ಯತ್ನಗಳು ನಡೆದಿವೆ. ಆ ಪ್ರದೇಶಗಳಲ್ಲಿ ಮತ್ತಷ್ಟು ಸಾವು-ನೋವುಗಳು ಸಂಭವಿಸಿರುವ ಆತಂಕವಿದ್ದು, ಮೃತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಲಾವಾರಸದ ಹೊಳೆ ಭೋರ್ಗರೆಯುತ್ತಿರುವುದರಿಂದ ಸಾವಿರಾರು ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ. ರಕ್ಷಣಾ ಮತ್ತು ಪರಿಹಾರ ಕಾರ್ಯ ಸಮರೋಪಾದಿಯಲ್ಲಿ ಸಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ