ನವದೆಹಲಿ, ಜೂ.5-ಏರ್ಸೆಲ್ ಮ್ಯಾಕ್ಸಿಸ್ ಹಣ ದುರ್ಬಳಕೆ ಪ್ರಕರಣದಲ್ಲಿ ಕೇಂದ್ರದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಧುರೀಣ ಪಿ.ಚಿದಂಬರಂ ಅವರಿಗೆ ಬಂಧನದಿಂದ ಜುಲೈ 10ರ ವರೆಗೆ ಮಧ್ಯಂತರ ರಕ್ಷಣೆಯನ್ನು ದೆಹಲಿಯ ನ್ಯಾಯಾಲಯವೊಂದು ಇಂದು ಮಂಜೂರು ಮಾಡಿದೆ.
ಈ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಚಿದಂಬರಂ ಸಲ್ಲಿಸಿದ್ದ ಮನವಿ ಅರ್ಜಿ ಕುರಿತು ಸವಿವರ ಪ್ರತ್ಯುತ್ತರ ದಾಖಲಿಸಲು ಜಾರಿ ನಿರ್ದೇಶನಾಲಯ(ಇಡಿ) ಹೆಚ್ಚು ಕಾಲಾವಕಾಶ ಕೋರಿದ ನಂತರ ವಿಶೇಷ ನ್ಯಾಯಮೂರ್ತಿ ಒ.ಪಿ.ಸೈನಿ ಈ ಆದೇಶ ಹೊರಡಿಸಿದರು. ಇದರೊಂದಿಗೆ 305 ಕೋಟಿ ರೂ.ಗಳ ಹಣ ದುರ್ಬಳಕೆ ಪ್ರಕರಣದಲ್ಲಿ ಚಿದು ಜು.10ರ ವರೆಗೆ ಬಂಧನ ಭೀತಿಯಿಂದ ನಿರಾಳವಾಗಿದ್ದಾರೆ.
ಇಡಿ ಪರವಾಗಿ ವಕೀಲರಾದ ಸೋನಿಯಾ ಮಾಥುರ್ ಮತ್ತು ನೀತೇಶ್ ರಾಣಾ ಕೋರ್ಟ್ಗೆ ಮನವಿ ಸಲ್ಲಿಸಿ ವಿವರ ಪ್ರತ್ಯುತ್ತರಕ್ಕೆ ನಾಲ್ಕು ವಾರಗಳ ಅವಕಾಶ ಕೋರಿದರು. ಇದೇ ವೇಳೆ ಚಿದಂಬರಂ ಪರ ವಕೀಲರಾದ ಅಭಿಷೇಕ್ ಮನು ಸಿಂಘ್ವಿ ಮತ್ತು ಪಿ.ಕೆ.ದುಬೇ ಇದೇ ಪ್ರಕರಣದಲ್ಲಿ ಚಿದಂಬರಂ ಪುತ್ರ ಮತ್ತು ಉದ್ಯಮಿ ಕಾರ್ತಿ ಚಿದಂಬರಂ ಅವರ ಪುತ್ರನ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಗೆ ಕೋರ್ಟ್ ಈಗಾಗಲೇ ಜುಲೈ 10ರ ದಿನಾಂಕ ನಿಗದಿಗೊಳಿಸಿದೆ. ಅದೇ ದಿನ ಈ ಪ್ರಕರಣದ ವಿಚಾರಣೆಗೆ ದಿನಾಂಕ ಗೊತ್ತು ಮಾಡುವಂತೆ ಕೋರಿದರು. ಇದಕ್ಕೆ ನ್ಯಾಯಾಲಯ ಸಮ್ಮತಿ ನೀಡಿದೆ.
ಏರ್ಸೆಲ್ ಮ್ಯಾಕ್ಸಿಸ್ ಹಣ ದುರ್ಬಳಕೆ ಪ್ರಕರಣದಲ್ಲಿ ಚಿದಂಬರಂ ಅವರ ವಿರುದ್ಧ ಜೂ.5ರವರೆಗೆ ಬಲವಂತದ ಕ್ರಮ (ಬಂಧನ) ಕೈಗೊಳ್ಳದಂತೆ ದೆಹಲಿಯ ವಿಶೇಷ ನ್ಯಾಯಾಲಯ ಜಾರಿ ನಿರ್ದೇಶನಾಲಯಕ್ಕೆ(ಇಡಿ) ನಿರ್ದೇಶನ ನೀಡಿತ್ತು.
ಇಡಿ ಮುಂದೆ ವಿಚಾರಣೆಗೆ ಹಾಜರು: ಇದೇ ಪ್ರಕರಣದ ಸಂಬಂಧ ಚಿದಂಬರಂ ಇಂದು ಜಾರಿ ನಿರ್ದೇಶನಾಲಯದ ಮುಂದೆ ವಿಚಾರಣೆಗೆ ಹಾಜರಾದರು. ನಿನ್ನೆ ತನಿಖಾ ಸಂಸ್ಥೆ ಸಮನ್ಸ್ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ 10.58ರಲ್ಲಿ ದೆಹಲಿಯ ಇಡಿ ಕೇಂದ್ರ ಕಚೇರಿಗೆ ತಮ್ಮ ವಕೀಲರೊಂದಿಗೆ ಹಾಜರಾದ ಚಿದು ವಿಚಾರಣೆಗೆ ಒಳಪಟ್ಟರು.