ಸಂಪುಟ ರಚನೆ ಎರಡು ಹಂತಗಳಲ್ಲಿ ಮಾಡಲು ನಿರ್ಧರಿಸಲಾಗಿದೆ: ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ

ಬೆಂಗಳೂರು:ಜೂ-5: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಸಂಪುಟ ರಚನೆ ಎರಡು ಹಂತದಲ್ಲಿ ನಡೆಯಲಿದೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿರುವ ಸಿಎಂ ಕುಮಾರಸ್ವಾಮಿ, ಮೈತ್ರಿ ಸರ್ಕಾರದಲ್ಲಿ ಯಾವುದೇ ಭಿನ್ನಾಭಿಪ್ರಾವಿಲ್ಲ. ಆದರೆ ಖಾತೆ ಹಂಚಿಕೆ ಸಂಬಂದ ಚರ್ಚೆಗಳು ಮುಂದುವರೆದಿವೆ. ಹೀಗಾಗಿ ಸಂಪುಟ ರಚನೆಯನ್ನು 2 ಹಂತದಲ್ಲಿ ಮಾಡುವ ಕುರಿತು ನಿರ್ಧರಿಸಲಾಗಿದೆ. ಮೊದಲ ಹಂತದಲ್ಲಿ ಜೆಡಿಎಸ್ ನ 9 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದು, ಬಳಿಕ 2ನೇ ಹಂತದಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಹೇಳಿದ್ದಾರೆ.

ಜೆಡಿಎಸ್ ಪಕ್ಷದ ವರಿಷ್ಠರಾದ ದೇವೇಗೌಡ ಅವರು ತಮಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ. ಹೀಗಾಗಿ ಖಾತೆ ಹಂಚಿಕೆ ಸಂಬಂಧ ಅಂತಿಮ ನಿರ್ಧಾರ ನನ್ನದೇ. ಖಾತೆ ಹಂಚಿಕೆ ಸಂಬಂಧ ಪಕ್ಷದಲ್ಲಿ ಯಾವುದೇ ಗೊಂದಲಗಳಿಲ್ಲ. ಕೇವಲ ಉತ್ತಮ ಆಡಳಿತ ನೀಡುವುದರತ್ತ ನಮ್ಮ ಗಮನವಿದೆ. ಇಂದು ನಡೆದ ನಮ್ಮ ಜೆಡಿಎಸ್ ಪಕ್ಷದ ಶಾಸಕಾಂಗ ಸಭೆ ಉತ್ತಮ ಆಡಳಿತ ನೀಡಲು ಸಹಕರಿಸುವಂತೆ ಶಾಸಕರಲ್ಲಿ ಮನವಿ ಮಾಡಿದ್ದೇವೆ. ಶಾಸಕರೂ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದ್ದಾರೆ.

ಅಂತೆಯೇ ಜೂನ್ 1ರ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಒಪ್ಪಂದ ಅನ್ವಯ ಕಾಂಗ್ರೆಸ್ ನ 22 ಶಾಸಕರಿಗೆ ಮತ್ತು ಜೆಡಿಎಸ್ 12 ಶಾಸಕರಿಗೆ ಸಚಿವ ಸ್ಥಾನ ನೀಡುವ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ. ಕಾಂಗ್ರೆಸ್ ಗೆ ಗೃಹಖಾತೆ, ನೀರಾವರಿ, ಆರೋಗ್ಯ, ಕೃಷಿ, ಮಹಿಳಾ ಮತ್ತು ಮಕ್ಕಳ ಸಬಲೀಕರಣ ಖಾತೆ ನೀಡಲಾಗಿದ್ದು, ಜೆಡಿಎಸ್ ಗೆ ವಿತ್ತ, ಅಬಕಾರಿ, ನಾಗರಿಕ ಸೇವೆ, ಶಿಕ್ಷಣ, ಪ್ರವಾಸೋಧ್ಯಮ, ಸಾರಿಗೆ ಖಾತೆ ನೀಡಲಾಗಿದೆ ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ