ನಾಳೆ ಮಧ್ಯಾಹ್ನ ಸಂಪುಟ ವಿಸ್ತರಣೆ; ಅಂದೇ ಖಾತೆಗಳ ಹಂಚಿಕೆ: ಉಪಮುಖ್ಯಮಂತ್ರಿ ಪರಮೇಶ್ವರ್

ಬೆಂಗಳೂರು:ಜೂ-5: ನಾಳೆ ಮಧ್ಯಾಹ್ನ 2ಕ್ಕೆ ಸಂಪುಟ ವಿಸ್ತರಣೆ ಮಾಡಿ, ಅಂದೇ ಖಾತೆಗಳನ್ನು ಹಂಚಲಾಗುತ್ತದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ತಿಳಿಉಸಿದ್ದಾರೆ.

ಯಾರಿಗೆ ಸಚಿವ ಸ್ಥಾನ ನೀಡಲಾಗುವುದು ಎಂಬುದು ಅಂದೇ ತಿಳಿಯುತ್ತದೆ. ಪ್ರತಿಯೊಂದು ಜಿಲ್ಲೆಗೆ ಸಚಿವರನ್ನು ನೇಮಕ ಮಾಡಲಾಗುವುದು ಎಂದು ಹೇಳಿದ್ದಾರೆ.

ಇನ್ನು ಡಿ.ಕೆ.ಶಿವಕುಮಾರ್ ಕುರಿತು ಮಾತನಾಡಿದ ಅವರು, ಡಿ ಕೆ ಶಿವಕುಮಾರ್ ಪಕ್ಷದ ಒಬ್ಬ ಪ್ರಾಮಾಣಿಕ ಶಿಸ್ತಿನ ಸಿಪಾಯಿ. ಅವರಿಗೆ ಯಾವುದೇ ರೀತಿಯ ಅಸಮಾಧಾನವಿಲ್ಲ. ಪಕ್ಷ ಯಾವುದೇ ಜವಾಬ್ದಾರಿ ನೀಡಿದರೂ ಅದನ್ನು ನಿಭಾಯಿಸಲು ಅವರು ಸಿದ್ಧರಿದ್ದಾರೆಂದು ತಿಳಿಸಿದ್ದಾರೆ.

ಎಸ್.ಆರ್.ಪಾಟೀಲ್ ರಾಜೀನಾಮೆ ನೀಡುವುದರ ಕಾರಣ ತಿಳಿದುಬಂದಿಲ್ಲ. ಅವರು ನೇರವಾಗಿ ಎಐಸಿಸಿ ಅಧ್ಯಕ್ಷರಿಗೇ ರಾಜೀನಾಮೆ ನೀಡಿದ್ದಾರೆ. ಬಹುಶಃ ಇತ್ತೀಚೆಗೆ ಅವರ ಬಾಗಲಕೋಟೆ ನಿವಾಸದ ಮುಂದೆ ಪ್ರತಿಭಟನೆಯೊಂದು ನಡೆದಿತ್ತು. ಇದರಿಂದ ಬೇಸತ್ತು ರಾಜೀನಾಮೆ ನೀಡಿರಬಹುದು ಎಂದಿದ್ದಾರೆ.

ಇದೇವೇಳೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಒಟ್ಟಿಗೆ ಸ್ಪರ್ಧೆ ನಡೆಸಲಿದೆ. ಆದರೆ, ಸೀಟುಗಳ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ,

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ