ಬೆಂಗಳೂರು, ಜೂ.5- ಜನರು ತಮ್ಮ ಕಷ್ಟ ಕಾರ್ಪಣ್ಯಗಳನ್ನು ಹೇಳಿಕೊಳ್ಳಲು ದೂರದೂರುಗಳಿಂದ ಬರುವ ಪರಿಪಾಟಲನ್ನು ತಪ್ಪಿಸಲು ಜಿಲ್ಲಾವಾರು ಜನತಾದರ್ಶನವನ್ನು ಇಡೀ ದಿನ ನಡೆಸಲು ಚಿಂತನೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಜನತಾದರ್ಶನದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಪ್ರವಾಸ ಕೈಗೊಂಡು ಇಡೀ ದಿನ ಜನತಾದರ್ಶನ ನಡೆಸುವ ಮೂಲಕ ಸ್ಥಳೀಯವಾಗಿ ಅಹವಾಲು ಸ್ವೀಕರಿಸಿ ಅವರ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಎಲ್ಲಾ ರಾಜಕೀಯ ಜಂಜಾಟಗಳು ಮುಗಿದ ಮೇಲೆ ಈ ಬಗ್ಗೆ ತೀರ್ಮಾನ ಮಾಡಲಿದ್ದೇವೆ ಎಂದು ಸಿಎಂ ಹೇಳಿದರು.
ತಂದೆ, ತಾಯಿ ಅಥವಾ ಗಂಡ ಇಲ್ಲದ ಹೆಣ್ಣು ಮಕ್ಕಳು ಕಷ್ಟ ಪರಿಹರಿಸುವಂತೆ ಕೇಳಲೋ ಆಥವಾ ಶಾಲಾ-ಕಾಲೇಜು ಶುಲ್ಕ ಸಂಬಂಧ, ಉದ್ಯೋಗ, ವೈದ್ಯಕೀಯ ಸೌಲಭ್ಯ ಇನ್ನಿತರೆ ಸಹಾಯಕ್ಕಾಗಿ ದೂರದ ಊರುಗಳಿಂದ ಬರಬೇಕಾಗುತ್ತದೆ. ಇದನ್ನು ತಪ್ಪಿಸಲು ಸ್ಥಳೀಯವಾಗಿ ಜನತಾ ದರ್ಶನ ನಡೆಸಿದರೆ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ವಿವರಿಸಿದರು.
ಉಸಿರಾಡಲು ಅವಕಾಶವಿಲ್ಲದಂತಾಗಿದೆ. ಪ್ರಣಾಳಿಕೆಯಲ್ಲಿ ನೀಡಲಾಗಿದ್ದ ಭರವಸೆಗಳನ್ನು ಈಡೇರಿಸಲು ಸಮಯಾವಕಾಶ ಬೇಕಾಗಿದೆ. ಅದೇ ರೀತಿ ಜನತಾ ದರ್ಶನದಲ್ಲಿ ಸ್ವೀಕರಿಸಿದ ಅಹವಾಲುಗಳೆಲ್ಲದ್ದಕ್ಕೂ ಪರಿಹಾರ ಹುಡುಕುವ ರೀತಿಯಲ್ಲೂ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ರಾಜ್ಯಾದ್ಯಂತ ಹೆಚ್ಚಿರುವ ಮಳೆ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಗೆ ಯಾವುದೇ ಸಮಸ್ಯೆ ಎದುರಾದರೂ ತುರ್ತು ಕ್ರಮ ಕೈಗೊಳ್ಳಲು ಸೂಚನೆ ಕೊಟ್ಟಿದ್ದೇವೆ. ಅದರಂತೆ ಅವರು ಉತ್ತಮ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.
ಬಿ.ಎಸ್.ಯಡಿಯೂರಪ್ಪ ಅವರು ಮಳೆ ಹಾನಿ ಹಾಗೂ ನೆರೆ ಪ್ರದೇಶಗಳಿಗೆ ಪ್ರವಾಸ ಮಾಡುವುದಾಗಿ ಹೇಳಿದ್ದಾರೆ. ಅವರು ಪ್ರವಾಸ ಮಾಡಿ ನಡೆಸಿದ ಅಧ್ಯಯನ ಬಗ್ಗೆ ವರದಿಯನ್ನು ಸರ್ಕಾರಕ್ಕೆ ನೀಡಲಿ. ನಾವು ಕ್ರಮ ವಹಿಸುತ್ತೇವೆ ಎಂದು ಹೇಳಿದರು.
ಜನತಾ ದರ್ಶನದ ಆರಂಭದಲ್ಲೇ ಕುಮಾರಸ್ವಾಮಿ ಅವರಿಗೆ ಸಾರ್ವಜನಿಕರು ಜೈಕಾರ ಕೂಗಿದರು. ತಿರುಪತಿ ಪ್ರಸಾದವನ್ನು ಒಬ್ಬರು ಮುಖ್ಯಮಂತ್ರಿಗಳಿಗೆ ನೀಡಿದರು.