ವಾಷಿಂಗ್ಟನ್: ಇಬ್ಬರು ಭಾರತೀಯ ಪತ್ರಕರ್ತರಾದ ಗೌರಿ ಲಂಕೇಶ್ ಮತ್ತು ಸುದೀಪ್ ದತ್ ಭೌಮಿಕ್ ಸೇರಿದಂತೆ 2017ರಲ್ಲಿ ಹತ್ಯೆಯಾದ 18 ಪತ್ರಕರ್ತರು ಪ್ರತಿಷ್ಠಿತ ನ್ಯೂಸಿಯಂ ಪತ್ರಕರ್ತರ ಸ್ಮಾರಕ ಸೇರಿದ್ದಾರೆ.
ನ್ಯೂಸಿಯಂ ಪ್ರತಿ ವರ್ಷ ವಿಶ್ವದಾದ್ಯಂತ ಕರ್ತವ್ಯದ ವೇಳೆ ಹತ್ಯೆಯಾದ ಪತ್ರಕರ್ತರನ್ನು ತನ್ನ ಮ್ಯೂಸಿಯಂ ಆಯ್ಕೆ ಮಾಡುತ್ತದೆ ಮತ್ತು ಆ ಪತ್ರಕರ್ತರು ಎದುರಿಸಿದ ಅಪಾಯಗಳ ಬಗ್ಗೆ ಹಾಗೂ ಅವರ ಸಾವಿನ ಬಗ್ಗೆ ವಿವರಿಸುತ್ತದೆ.
ಈ ವರ್ಷ ಮ್ಯೂಸಿಯಂಗೆ ಆಯ್ಕೆಯಾದ 18 ಪತ್ರಕರ್ತರ ಪೈಕಿ ಎಂಟು ಮಹಿಳೆಯರು ಆಯ್ಕೆಯಾಗಿದ್ದಾರೆ.
ಕಳೆದ ವರ್ಷ ಹತ್ಯೆಯಾದ 55 ವರ್ಷದ ಗೌರಿ ಲಂಕೇಶ್ ಅವರು ಜಾತಿ ಪದ್ದತಿ ಮತ್ತು ಹಿಂದೂ ಮೂಲಭೂತವಾದದ ವಿರುದ್ಧ ಬಹಿರಂಗವಾಗಿ ಲೇಖನಗಳನ್ನು ಬರೆಯುವ ಮೂಲಕ ಭಾರತದಾದ್ಯಂತ ಗುರುತಿಸಿಕೊಂಡಿದ್ದರು ಎಂದು ನ್ಯೂಸಿಯಂ ಹಿರಿಯ ಪತ್ರಕರ್ತೆಯ ಬಗ್ಗೆ ಸಂಕ್ಷಿಪ್ತ ವಿವರಣೆ ನೀಡಿದೆ.
ಗೌರಿ ಲಂಕೇಶ್ ಅವರನ್ನು ಸೆಪ್ಟೆಂಬರ್ 5, 2017ರಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ನಗರದ ಅವರ ನಿವಾಸದಲ್ಲಿಯೇ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು.