ಭೋಪಾಲ್: ಮಾಹಿತಿ ಹಕ್ಕು ಕಾಯ್ದೆಯಡಿ ಆದಾಯ ತೆರಿಗೆ ಇಲಾಖೆಗೆ ಅರ್ಜಿ ಹಾಕಿದ ಸಮಾಜಿಕ ಕಾರ್ಯಕರ್ತ, ಯಾಕಾದರೂ, ಆರ್‌ಟಿಐ ಅರ್ಜಿ ಸಲ್ಲಿಸಿದೆ ಎಂದು ಪರಿತಪಿಸುತ್ತಿದ್ದಾರೆ.
ಕೇಳಿರುವ ಮಾಹಿತಿಗೆ ಈ ವರೆಗೆ ಸರಿಯಾದ ಉತ್ತರ ಸಿಗದಿದ್ದರೂ, ದೇಶದ ವಿವಿಧ ಆದಾಯ ತೆರಿಗೆ ಕಚೇರಿಗಳಿಂದ ಮಾಹಿತಿ ವರ್ಗಾವಣೆ ಮಾಡಿರುವ ಕುರಿತು ಪತ್ರಗಳು ಮಾತ್ರ ಬರುತ್ತಿವೆ. ಈ ವರೆಗೆ 1,170 ಪತ್ರಗಳು ಅಂಚೆ ಮೂಲಕ ಮನೆ ತಲುಪಿದೆ.
ಚಂದ್ರಶೇಖರ್ ಗೌರ್ ಎಂಬ ಆರ್‌ಟಿಐ ಕಾರ್ಯಕರ್ತ, ಫೆಬ್ರವರಿಯಲ್ಲಿ ದೇಶದ ವಿವಿಧ ನಗರಗಳಿಂದ ಬಾಕಿ ಇರುವ ತೆರಿಗೆ ಮಾಹಿತಿಯನ್ನು ಒಟ್ಟೂಗುಡಿಸಿ ನೀಡುವಂತೆ ಆನ್‌ಲೈನ್ ಅರ್ಜಿ ಸಲ್ಲಿಸಿದ್ದರು. ಅಲ್ಲದೆ ಉತ್ತರವನ್ನೂ ಆನ್‌ಲೈನ್ ಮೂಲಕ ನೀಡುವಂತೆ ಕೇಂದ್ರೀಯ ನೇರ ತೆರಿಗೆ ಮಂಡಳಿ(ಸಿಬಿಡಿಟಿ)ಗೆ ಕೋರಿದ್ದರು. ಈ ಅರ್ಜಿಯನ್ನು ಸಿಬಿಡಿಟಿ ಪ್ರಾದೇಶಿಕ ಕಚೇರಿಗಳಿಗೆ ವರ್ಗಾವಣೆ ಮಾಡಿದೆ. ಪ್ರಾದೇಶಿಕ ಕಚೇರಿಗಳಿಂದ ವಾರ್ಡ್ ಮಟ್ಟದ ಕಚೇರಿಗೆ ಅರ್ಜಿಯನ್ನು ವರ್ಗಾಯಿಸಲಾಗಿದೆ.
ಚಂದ್ರಶೇಖರ್ ಗೌರ್ ಅವರಿಗೆ ದಿನ ನಿತ್ಯ ಕನಿಷ್ಠ 20 ಪತ್ರಗಳು ಅಂಚೆ ಮೂಲಕ ಅರ್ಜಿಯ ವಿಭಾಗ ವರ್ಗಾವಣೆ ಮಾಡಿರುವ, ಹಾಗೂ ಅದಕ್ಕೆ ಬೇಕಾಗಿರುವ ಸಮಯವಕಾಶದ ಕುರಿತು ಮಾಹಿತಿ ಇರುವ ಪತ್ರ ಸಿಗುತ್ತಿದೆ. ಈ ವರೆಗೆ ಗರಿಷ್ಠ ಒಂದು ದಿನದಲ್ಲಿ 90 ಪತ್ರಗಳನ್ನು ಗೌರ್ ಪಡೆದುಕೊಂಡಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಪತ್ರಗಳನ್ನು ರವಾನಿಸಲು ಇಲಾಖೆ ಕನಿಷ್ಠ 50 ಸಾವಿರ ಖರ್ಚು ಮಾಡಿದೆ. ಈ ಮೂಲಕ ಸಾರ್ವಜನಿಕ ಹಣ ಲೂಟಿ ಮಾಡಲಾಗುತ್ತಿದೆ. ಆನ್‌ಲೈನ್ ಮೂಲಕ ಮಾಹಿತಿ ನೀಡುವಂತೆ ಕೇಳಿರುವುದನ್ನು ಈ ರೀತಿ ಗೊಂದಲ ಸೃಷ್ಟಿ ಮಾಡಲಾಗಿದೆ. ಅಲ್ಲದೆ ಒಟ್ಟಾರೆ ನಗರದ ಮಾಹಿತಿ ಕೇಳಿರುವುದಕ್ಕೆ ವಾರ್ಡ್ ಮಟ್ಟದಲ್ಲಿ ಮಾಹಿತಿ ಸಂಗ್ರಹಿಸಿ ನೀಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.