ಸಚಿವ ಸಂಪುಟ ರಚನೆ ಸಂಬಂಧ ರಾಜ್ಯ ನಾಯಕರು ದೆಹಲಿಗೆ ಬರುವ ಅವಶ್ಯಕತೆ ಇಲ್ಲ: ಕಾಂಗ್ರೆಸ್ ಹೈಕಮಾಂಡ್ ಸ್ಪಷ್ಟ ಸೂಚನೆ

 

ಬೆಂಗಳೂರು, ಜೂ.4- ಸಚಿವ ಸಂಪುಟ ವಿಸ್ತರಣೆ ಸಂಬಂಧ ರಾಜ್ಯ ನಾಯಕರ್ಯಾರು ದೆಹಲಿಗೆ ಬರುವ ಅವಶ್ಯಕತೆ ಇಲ್ಲ ಎಂದು ಕಾಂಗ್ರೆಸ್ ಹೈಕಮಾಂಡ್ ಸ್ಪಷ್ಟ ಸೂಚನೆ ನೀಡಿದೆ.

ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ದೆಹಲಿಗೆ ಹೊರಟು ನಿಂತಿದ್ದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಮಾಜಿ ಮುಖ್ಯಮಂತ್ರಿ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಮುಂತಾದವರಿಗೆ ಹೈಕಮಾಂಡ್‍ನ ಈ ನಿರ್ಧಾರದಿಂದ ನಿರಾಸೆಯಾದಂತಾಗಿದೆ.
ಬುಧವಾರ ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮ ನಿಗದಿಯಾಗಿದ್ದು, ಕಾಂಗ್ರೆಸ್‍ನಿಂದ ಸಂಪುಟಕ್ಕೆ ಸೇರುವವರ ಪಟ್ಟಿ ತಯಾರಿಸಲು ಹೈಕಮಾಂಡ್ ನಾಯಕರು ಮಾತುಕತೆ ನಡೆಸಲು ನಿರ್ಧರಿಸಿದ್ದರು.

ಅದಕ್ಕಾಗಿ ರಾಜ್ಯ ನಾಯಕರು ದೆಹಲಿಗೆ ಪ್ರಯಾಣ ಬೆಳೆಸಲು ಮುಂದಾಗಿದ್ದರು. ತಾವೆಲ್ಲ ಬಂದರೆ ಆಕಾಂಕ್ಷಿಗಳು ಬರುತ್ತಾರೆ. ಹಾಗಾಗಿ ತಾವು ಬರುವುದು ಬೇಡ. ಸಂಪುಟಕ್ಕೆ ಸೇರುವವರ ಪಟ್ಟಿ ಈಗಾಗಲೇ ಸಿದ್ಧವಾಗಿ ನಮ್ಮ ಬಳಿ ಇದೆ. ಪರಿಷ್ಕøತ ಪಟ್ಟಿಯೇನಾದರು ಇದ್ದರೆ ನಮಗೆ ಕಳುಹಿಸಿ ಕೊಡಿ. ಅಗತ್ಯ ವಿದ್ದರೆ ನಿಮ್ಮನ್ನು ಕರೆಸಿಕೊಳ್ಳುತ್ತೇವೆ. ಸದ್ಯಕ್ಕೆ ನೀವು ಬರುವುದು ಬೇಡ ಎಂದು ಗುಲಾಬ್ ನಬಿ ಆಜಾದ್, ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ರಾಜ್ಯ ನಾಯಕರಿಗೆ ಸೂಚನೆ ನೀಡಿದ್ದಾರೆ. ಹಾಗಾಗಿ ಡೆಲ್ಲಿ ಪ್ರವಾಸಕ್ಕೆ ಬ್ರೇಕ್ ಬಿದ್ದಂತಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ