ಕೋಲ್ಕತಾ, ಜೂ. 4-ಜೇಡ ಕಡಿತದಿಂದ ಪಶ್ಚಿಮ ಬಂಗಾಳದ ಜನರು ಆತಂಕಕ್ಕೆ ಒಳಗಾಗಿದ್ದು, ರಾಜ್ಯಾದ್ಯಂತ ಈ ಜೇಡಗಳ ಮಾರಣಹೋಮವಾಗುತ್ತಿದೆ. ಜೇಡ ಕಡಿತದಿಂದ ಒಬ್ಬ ಮೃತಪಟ್ಟು, ಅನೇಕರು ಅಸ್ವಸ್ಥರಾಗಿದ್ದಾರೆ.
ಟರಾಂಟ್ಯುಲಾ ಎಂಬ ಜೇಡ ಪ್ರಬೇಧದ ಹಾವಳಿ ಪಶ್ಚಿಮ ಬಂಗಾಳದಲ್ಲಿ ಕಳೆದ ತಿಂಗಳಿನಿಂದ ತೀವ್ರಗೊಂಡಿದ್ದು, ಕನಿಷ್ಠ 38 ಪ್ರಕರಣಗಳು ವರದಿಯಾಗಿದ್ದು, ಜನ ಭಯಭೀತರಾಗಿದ್ದಾರೆ.
ಈ ಜೇಡ ಕಚ್ಚಿದರೆ ಉಸಿರಾಟದ ತೊಂದರೆ, ಪ್ರಮುಖ ಅಂಗಗಳಿಗೆ ರಕ್ತ ಪೂರೈಕೆ ಅಡ್ಡಿ, ಕಪ್ಪು ಕಲೆ, ಊತ, ತುಟಿ-ಗಂಟಲು ಊತ ಉರಿ, ತುರಿಕೆ, ರಕ್ತದೊತ್ತಡ ಇಳಿಮುಖ ಹಾಗೂ ಹೃದಯ ಬಡಿತದಲ್ಲಿ ಏರಿಳಿತ ಕಂಡುಬರುತ್ತದೆ.
ಈ ಜಾತಿಯ ಜೇಡ ಕೂದಲುಳ್ಳ ಕೀಟ. ಇದು ನಿಶಾಚರ ಜೀವಿ. ರಾತ್ರಿ ವೇಳೆ ಇತರ ಕ್ರಿಮಿ-ಕೀಟಗಳನ್ನು ಬೇಟೆಯಾಡುತ್ತದೆ. ಅರಣ್ಯ ಮತ್ತು ಮಳೆಯಾಧಾರಿತ ಅರಣ್ಯ ಪ್ರದೇಶಗಳಲ್ಲಿ ಮಾತ್ರ ಕಂಡುಬರುತ್ತದೆ.
ಪಶ್ಚಿಮ ಬಂಗಾಳದ ಮಿಡ್ನಾಪುರದಲ್ಲಿ ಜೇಡ ಕಡಿತದ ಮೊದಲ ಪ್ರಕರಣ ಬೆಳಕಿಗೆ ಬಂದಿತ್ತು. ಬಳಿಕ ಪುರುಲಿಯಾ, ವೀರ್ಭೂಮ್, ಬುದ್ರ್ವಾನ್, ಹೌರಾ, ಪೂರ್ವ ಮಿಡ್ನಾಪುರ್, ಮುರ್ಶಿದಾಬಾದ್ ಹಾಗೂ ಉತ್ತರ ದಿನಾಜ್ಪುರ್ ಜಿಲ್ಲೆಗಳಲ್ಲಿ ಜೇಡ ಕಡಿತದ ಪ್ರಕರಣಗಳು ವರದಿಯಾಗಿವೆ. ಬರಾಂಟ್ಯುಲಾ ಕಡಿತದಿಂದ ಈವರೆಗೆ ಓರ್ವ ಮೃತಪಟ್ಟು, ಹಲವರು ಅಸ್ವಸ್ಥರಾಗಿರುವುದು ಆತಂಕಕ್ಕೆ ಕಾರಣವಾಗಿದೆ.