ನವದೆಹಲಿ, ಜೂ.4-ಹಣ ವಂಚನೆ ಮತ್ತು ದುರ್ಬಳಕೆ ಪ್ರಕರಣದ ಸಂಬಂಧ ಗುಜರಾತ್ ಮೂಲದ ಸ್ಟರ್ಲಿಂಗ್ ಬಯೋಟೆಕ್ ಅಂಡ್ ಸಂದೇಸರ ಸಮೂಹ ಸಂಸ್ಥೆಗಳಿಗೆ ಸೇರಿದ 4,700 ಕೋಟಿ ರೂ.ಗಳ ಆಸ್ತಿಯನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡ ಬೆನ್ನಲ್ಲೇ ಇದು ಕಾಂಗ್ರೆಸ್ ನಾಯಕ ಅಹಮದ್ ಪಟೇಲ್ಗೂ ಕಂಟಕವಾಗಿ ಪರಿಣಮಿಸುವ ಸಾಧ್ಯತೆ ಇದೆ.
ಈ ಸಂಸ್ಥೆ ಹಾಗೂ ಇದರ ಪ್ರವರ್ತಕರೊಂದಿಗೆ ಕಾಂಗ್ರೆಸ್ನ ಪ್ರಭಾವಿ ನಾಯಕರೂ ಆದ ರಾಜ್ಯಸಭಾ ಸದಸ್ಯ ಅಹಮದ್ ಪಟೇಲ್ ನಿಕಟ ಸಂಬಂಧ ಹೊಂದಿರುವುದರಿಂದ ಈಗ ತನಿಖಾ ಸಂಸ್ಥೆಗಳ ಕಣ್ಣು ಇವರ ಮೇಲೆ ನೆಟ್ಟಿದೆ. 12,300 ಕೋಟಿ ರೂ.ಗಳ ಪಿಎನ್ಬಿ ವಂಚನೆ ಪ್ರಕರಣದ ಸಂಬಂಧ ವಜ್ರ ವ್ಯಾಪಾರಿ ನೀರವ್ ಮೋದಿಗೆ ಸೇರಿದ 5,700 ಕೋಟಿ ರೂ.ಗಳ ಆಸ್ತಿಪಾಸ್ತಿಗಳನ್ನು ಇಡಿ ಅಧಿಕಾರಿಗಳು ವಶಪಡಿಸಿಕೊಂಡ ನಂತರ ಜಪ್ತಿ ಮಾಡಲಾದ ಎರಡನೇ ಅತಿ ದೊಡ್ಡ ಸ್ವತ್ತುಗಳು ಇದಾಗಿದೆ.
ಅನೇಕ ರಾಷ್ಟ್ರೀಕೃತ ಮತ್ತು ಸಾರ್ವಜನಿಕ ವಲಯದ ಬ್ಯಾಂಕುಗಳಿಂದ ಕೋಟ್ಯಂತರ ರೂ.ಗಳನ್ನು ಪಡೆದು ವಂಚಿಸಿ ಹಣ ದುರ್ಬಳಕೆ ಮಾಡಿಕೊಂಡ ಪ್ರಕರಣ ಇದಾಗಿದೆ. ವಡೋದರ ಮೂಲದ ಸ್ಟರ್ಲಿಂಗ್ ಬಯೋಟೆಕ್ ಮತ್ತು ಅವರ ಸಹೋದರಿ ಸಂಸ್ಥೆ ಸಂದೇಸರ ಗ್ರೂಪ್ ಹಾಗೂ ಅದರ ಪ್ರವರ್ತಕರ ವಿರುದ್ಧ ಪಿಎಂಎಲ್ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡಿರುವ ತನಿಖಾ ಸಂಸ್ಥೆಗಳು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿವೆ.
ಏತನ್ಮಧ್ಯೆ, ಗುಜರಾತ್ನವರೇ ಆದ ಅಹಮದ್ ಪಟೇಲ್ ಅವರಿಗೂ ಈ ಸಮೂಹ ಸಂಸ್ಥೆಗಳಿಗೂ ನಿಕಟ ನಂಟಿದೆ ಎಂಬುದು ಕಂಡುಬಂದಿದೆ. ಈ ನಿಟ್ಟಿನಲ್ಲಿ ಎಲ್ಲಾ ಆಯಾಮಗಳಿಂದಲೂ ಕೇಂದ್ರೀಯ ತನಿಖಾ ದಳ(ಸಿಬಿಐ) ಮತ್ತು ಇಡಿ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.
ಸಂಸ್ಥೆಯ ಪರವಾಗಿ ಆದಾಯ ತೆರಿಗೆ ಅಧಿಕಾರಿಗಳಿಗೆ ಲಂಚ ರುಷುವತ್ತು ಆಮಿಷವೊಡ್ಡಿದರೆನ್ನಲಾದ ಅಹಮದ್ ಪಟೇಲ್ ಅಳಿಯ ಇರ್ಫಾನ್ ಸಿದ್ಧಿಖಿ ಪ್ರಕರಣ ಸಹ ಇದರೊಂದಿಗೆ ಥಳಕು ಹಾಕಿಕೊಂಡಿದೆ. ಇದರಲ್ಲಿ ಪಟೇಲರ ಪಾತ್ರವೇನು. ಅವರು ತಮ್ಮ ರಾಜಕೀಯ ಪ್ರಭಾವ ಬೀರಿದ್ದಾರೆಯೇ ಹಾಗೂ ಆರೋಪಿಗಳನ್ನು ರಕ್ಷಿಸಲು ಮುಂದಾಗಿದ್ದಾರೆಯೇ ಎಂಬಿತ್ಯಾದಿ ಸಂಗತಿಗಳ ಬಗ್ಗೆಯೂ ತನಿಖೆ ಮುಂದುವರಿದಿದೆ.
ಈ ಸಂಬಂಧ ಪಟೇಲರನ್ನು ತನಿಖಾ ಸಂಸ್ಥೆಗಳು ಯಾವುದೇ ಸಂದರ್ಭದಲ್ಲಿ ವಿಚಾರಣೆಗೆ ಹಾಜರಾಗಲು ಸೂಚಿಸುವ ನಿರೀಕ್ಷೆ ಇದೆ.