
ನವದೆಹಲಿ, ಜೂ.4- ಅನರ್ಹಗೊಂಡ ಸುಮಾರು 73,000 ಕಂಪನಿಗಳು ನೋಟು ಅಮಾನ್ಯೀಕರಣದ ನಂತರ 24,000 ಕೋಟಿ ರೂ.ಗಳನ್ನು ಬ್ಯಾಂಕ್ ಖಾತೆಗಳಲ್ಲಿ ಠೇವಣಿ ಇಟ್ಟಿವೆ ಎಂಬ ಸಂಗತಿಯನ್ನು ಸರ್ಕಾರಿ ಅಂಕಿ-ಅಂಶಗಳು ತಿಳಿಸಿವೆ.
ದೀರ್ಘ ಕಾಲದಿಂದ ವಾಣಿಜ್ಯ ಮತ್ತು ವ್ಯವಹಾರಗಳನ್ನು ನಡೆಸದೇ ಇದ್ದ 2.26 ಲಕ್ಷ ಕಂಪನಿಗಳ ಹೆಸರುಗಳನ್ನು ಕೇಂದ್ರ ಸರ್ಕಾರದ ಕಾಪೆರ್Çರೇಟ್ ವ್ಯವಹಾರಗಳ ಸಚಿವಾಲಯ ತೆಗೆದು ಹಾಕಿದೆ. ಕಾಳಧನ ಮತ್ತು ಅಕ್ರಮ ಸ್ವತ್ತುಗಳ ವಿರುದ್ಧ ಕೇಂದ್ರ ರಾಷ್ಟ್ರವ್ಯಾಪಿ ಕೈಗೊಂಡ ಕಾರ್ಯಾಚರಣೆಗಳ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ.
ಇವುಗಳಲ್ಲಿ ಅನೇಕ ಸಂಸ್ಥೆಗಳು ಅಕ್ರಮ ಹಣಕಾಸು ವಹಿವಾಟು ನಡೆಸುವ ಉದ್ದೇಶದಿಂದಲೇ ಕಂಪನಿಗಳನ್ನು ಆರಂಭಿಸಿವೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಈ 2.26 ಲಕ್ಷ ಅನರ್ಹ ಕಂಪನಿಗಳಲ್ಲಿ 1.68 ಲಕ್ಷ ಸಂಸ್ಥೆಗಳ ಬ್ಯಾಂಕ್ ಖಾತೆಗಳನ್ನು ಸಚಿವಾಲಯ ಪರಿಶೀಲನೆ ನಡೆಸಿದ್ದು, ನೋಟು ಅಮಾನ್ಯೀಕರಣದ ನಂತರ ಇವುಗಳಲ್ಲಿ 73,000 ಸಂಸ್ಥೆಗಳು 24,000 ಕೋಟಿ ರೂ.ಗಳನ್ನು ಠೇವಣಿಯಾಗಿರಿಸಿದೆ. ಇನ್ನೂ ಅನೇಕ ಕಂಪನಿಗಳ ಹಣಕಾಸು ವಹಿವಾಟಿಗೆ ಸಂಬಂಧಪಟ್ಟಂತೆ ವಿವಿಧ ಬ್ಯಾಂಕುಗಳ ಶಾಖೆಗಳನ್ನು ತಪಾಸಣೆ ಮಾಡಲಾಗುತ್ತಿದೆ. ಅಲ್ಲದೇ ಕೆಲವು ಸಂಸ್ಥೆಗಳ ವಿರುದ್ಧ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದು ಉನ್ನತಾಧಿಕಾರಿಯೊಬ್ಬರು ಹೇಳಿದ್ದಾರೆ.