ಬೆಂಗಳೂರು, ಜೂ.4- ನಿರ್ಮಾಣ ಹಂತದ ಕಟ್ಟಡದ ಮೊದಲ ಮಹಡಿಯಿಂದ ಆಯತಪ್ಪಿ ಬಿದ್ದು ಸೆಕ್ಯೂರಿಟಿ ಗಾರ್ಡ್ ಮೃತಪಟ್ಟಿರುವ ಘಟನೆ ಎಚ್‍ಎಸ್‍ಆರ್ ಲೇಔಟ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೃತಪಟ್ಟ ಸೆಕ್ಯೂರಿಟಿ ಗಾರ್ಡ್‍ನನ್ನು ಗೋಪಾಲ್ ಎಂದು ಗುರುತಿಸಲಾಗಿದೆ.
ನೇಪಾಳ ಮೂಲದ ಗೋಪಾಲ್ ಎಚ್‍ಎಸ್‍ಆರ್ ಲೇಔಟ್, 3ನೇ ಸೆಕ್ಟಾರ್, 11ನೇ ಕ್ರಾಸ್‍ನಲ್ಲಿನ ನಿರ್ಮಾಣ ಹಂತದ ಕಟ್ಟಡದಲ್ಲಿ ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡುತ್ತಿದ್ದರು.
ರಾತ್ರಿ ಗೋಪಾಲ್ ಊಟ ಮಾಡುವ ಸಲುವಾಗಿ ತನ್ನ ಸ್ನೇಹಿತ ಭರತ್ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿರುವ ಇದೇ ವ್ಯಾಪ್ತಿಯ 22ನೇ ಕ್ರಾಸ್, 3ನೇ ಹಂತದಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡದ ಬಳಿ ಬಂದಿದ್ದಾರೆ.
ಭರತ್ ಹಾಗೂ ಗೋಪಾಲ್ ಒಟ್ಟಿಗೆ ಊಟ ಮಾಡಿದ್ದಾರೆ. ತದನಂತರ ಗೋಪಾಲ್ ತಾನು ಕೆಲಸ ಮಾಡುತ್ತಿದ್ದ ಕಟ್ಟಡದ ಬಳಿ ವಾಪಸ್ ಹೋಗದೆ ಇದೇ ಕಟ್ಟಡದ ಮೊದಲ ಮಹಡಿಗೆ ಹೋಗಿ ಮಲಗಿದ್ದಾರೆ.
ಇತ್ತ ಭರತ್ ತನ್ನ ಪಾಡಿಗೆ ಕಟ್ಟಡದ ಶೆಡ್‍ನಲ್ಲಿ ಮಲಗಿದ್ದಾರೆ. ಮಧ್ಯರಾತ್ರಿ ಗೋಪಾಲ್ ಮೂತ್ರ ವಿಸರ್ಜನೆಗೆಂದು ಹೋದಾಗ ಆಯತಪ್ಪಿ ಮೊದಲ ಮಹಡಿಯಿಂದ ಲಿಪ್ಟ್‍ಗುಂಡಿಗೆ ಬಿದ್ದು ಮೃತಪಟ್ಟಿದ್ದಾರೆ.
ಬೆಳಗ್ಗೆ ಸ್ನೇಹಿತ ಭರತ್ ಎದ್ದು ಮೊದಲ ಮಹಡಿಗೆ ಹೋದಾಗಲೇ ಗೋಪಾಲ್ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟಿರುವುದು ಗೊತ್ತಾಗಿದೆ.
ಸುದ್ದಿ ತಿಳಿದ ಎಚ್‍ಎಸ್‍ಆರ್ ಲೇಔಟ್ ಠಾಣೆ ಪೆÇಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಶವವನ್ನು ಸೆಂಟ್‍ಜಾನ್ ಆಸ್ಪತ್ರೆಗೆ ಸಾಗಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.