ಬೆಂಗಳೂರು, ಜೂ.4-ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನ ಸೋಲಿನ ಪರಾಮರ್ಶೆ ನಡೆಸಿ 10 ದಿನಗಳೊಳಗೆ ವರದಿ ನೀಡುವಂತೆ ಹೈಕಮಾಂಡ್ ಸೂಚನೆ ನೀಡಿದೆ.
ಜಿಲ್ಲಾಧ್ಯಕ್ಷರು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಸೋಲಿನ ಕಾರಣಗಳನ್ನು ಅವಲೋಕನ ನಡೆಸಿ 10 ದಿನಗಳೊಳಗೆ ಹೈಕಮಾಂಡ್ಗೆ ವರದಿ ನೀಡಬೇಕಾಗಿದೆ. 10 ದಿನದಲ್ಲಿ ಕಮಿಟಿ ರಚಿಸಿ ಸೋಲಿಗೆ ಕಾರಣರಾದವರ ವಿರುದ್ಧ ಹೈಕಮಾಂಡ್ ಕಠಿಣ ಶಿಸ್ತು ಕ್ರಮಕೈಗೊಳ್ಳುವ ಸಾಧ್ಯತೆ ಇದೆ.
ರಾಹುಲ್ಗಾಂಧಿಯವರು ಎಐಸಿಸಿ ಅಧ್ಯಕ್ಷರಾದ ನಂತರ ನಡೆದ ಮೊದಲ ಚುನಾವಣೆ ಇದಾಗಿದ್ದು, ಕರ್ನಾಟಕದಲ್ಲಿ ಕಾಂಗ್ರೆಸ್ ಸೋಲನ್ನನುಭವಿಸಿದ್ದು ರಾಹುಲ್ಗಾಂಧಿಯವರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿರುವುದಲ್ಲದೆ, ಮುಂಬರುವ ಲೋಕಸಭೆ ಚುನಾವಣೆಗೆ ಭಾರೀ ಮುಜುಗರ ಉಂಟಾಗಲಿದೆ.
ಕಾಂಗ್ರೆಸ್ ಸೋಲಿಗೆ ಅನೇಕ ಕಡೆ ಕಾಂಗ್ರೆಸ್ ನಾಯಕರೇ ಕಾರಣವಾಗಿರುವ ಹಿನ್ನೆಲೆಯಲ್ಲಿ ಸೋಲಿನ ಅಂಶಗಳನ್ನು ಹೈಕಮಾಂಡ್ ಪರಿಶೀಲಿಸಲಿದೆ.
ಚುನಾವಣೆ ಸಂದರ್ಭದಲ್ಲಿ ಪಕ್ಷವಿರೋಧಿ ಚಟುವಟಿಕೆಗಳನ್ನು ನಡೆಸಿದವರು, ಪಕ್ಷದ ಅಧಿಕೃತ ಅಭ್ಯರ್ಥಿಗಳ ಸೋಲಿಗೆ ಕಾರಣರಾದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಕಠಿಣ ನಿರ್ಧಾರವನ್ನು ರಾಹುಲ್ಗಾಂಧಿಯವರು ಕೈಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
ಈ ಮೂಲಕ ಒಂದು ಎಚ್ಚರಿಕೆಯ ಪಾಠವನ್ನು ಕಲಿಸಲು ಮುಂದಾಗಿದ್ದಾರೆ ಎನ್ನಲಾಗಿದೆ. ತಮ್ಮ ತಮ್ಮ ಸ್ವಪ್ರತಿಷ್ಠೆಗಾಗಿ ಪಕ್ಷವನ್ನು ಬಲಿ ಕೊಡುವ ಹಲವು ನಾಯಕರನ್ನು ಬಲಿ ಹಾಕಬೇಕಿದೆ. ಹೀಗಾಗಿ ಈ ಚುನಾವಣೆಯಲ್ಲಿ ಕೆಲಸ ಮಾಡದವರು, ಪಕ್ಷ ವಿರೋಧಿ ಕೆಲಸ ಮಾಡಿದವರ ವಿರುದ್ಧ ಮುಲಾಜಿಲ್ಲದೆ ಕ್ರಮಕೈಗೊಳ್ಳಲು ಮುಂದಾಗಿದ್ದಾರೆ ಎನ್ನಲಾಗಿದೆ.
ದೊಡ್ಡ ದೊಡ್ಡ ನಾಯಕರುಗಳೇ ಪಕ್ಷ ವಿರೋಧಿ ಕೆಲಸಗಳನ್ನು ಮಾಡಿರುವುದು ಕಂಡುಬಂದಿದೆ. ಇದನ್ನು ಗಂಭೀರವಾಗಿ ಪರಿಗಣಿಸುವ ಸಾಧ್ಯತೆ ಇದೆ.
ಕಾಂಗ್ರೆಸ್ನಲ್ಲಿರುವ ಲಿಂಗಾಯತ, ಒಕ್ಕಲಿಗ ಮುಖಂಡರು ಪಕ್ಷಕ್ಕೆ ಪೂರಕವಾಗಿ ಕೆಲಸ ಮಾಡಿಲ್ಲ. ಆ ಸಮುದಾಯದ ಮತಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿಲ್ಲ. ಉತ್ತರ ಕನ್ನಡ, ಬಳ್ಳಾರಿ, ಕರಾವಳಿ, ಉತ್ತರ ಕರ್ನಾಟಕದಲ್ಲಿ ಹಲವು ನಾಯಕರು ಒಳ ರಾಜಕೀಯ ನಡೆಸಿದ್ದರಿಂದ ಪಕ್ಷಕ್ಕೆ ಸೋಲಾಗಿದೆ. ಈಗ ಇಂತಹ ನಾಯಕರ ವಿರುದ್ಧ ಕೈಗೊಳ್ಳುವ ಕ್ರಮ ಲೋಕಸಭಾ ಚುನಾವಣೆಗೂ ರಾಜಕೀಯ ಪಾಠವಾಗಬೇಕಿದೆ. ಪಕ್ಷದಲ್ಲಿ ಶಿಸ್ತು ಮೂಡದಿದ್ದರೆ ಸಮಸ್ಯೆ ಉಲ್ಬಣವಾಗುತ್ತದೆ. ಹಾಗಾಗಿ ಕೂಡಲೇ ವಾಸ್ತವಾಂಶದ ವರದಿ ತರಿಸಿಕೊಂಡು ಶಿಸ್ತು ಕ್ರಮದ ಕಠಿಣ ನಿರ್ಧಾರಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.
ವರದಿಯ ನಂತರ ಶಿಸ್ತು ಕ್ರಮ ಕೈಗೊಳ್ಳಲು ಒಂದು ಸಮಿತಿಯನ್ನು ರಚಿಸಲಿದ್ದಾರೆ. ಈ ಸಮಿತಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿರುವವರ ವಿರುದ್ಧ ಯಾವ ಕ್ರಮಕೈಗೊಳ್ಳಬೇಕು ಎಂಬುದನ್ನು ನಿರ್ಧರಿಸಲಿದೆ.