ಬೆಂಗಳೂರು, ಜೂ.4-ಕ್ರೈಸ್ತ ಅಭಿವೃದ್ಧಿ ಮಂಡಳಿ ಸ್ಥಾಪಿಸುವುದರೊಂದಿಗೆ ಕ್ರೈಸ್ತ ಸಮುದಾಯದ ಬಹುತೇಕ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕೆಂದು ಕರ್ನಾಟಕ ಕ್ರೈಸ್ತರ ಸಾಮಾಜಿಕ ಕ್ಷೇಮಾಭಿವೃದ್ದಿ ಅಸೋಸಿಯೇಷನ್ ಅಧ್ಯಕ್ಷ ಹ್ಯಾರಿ ಡಿಸೋಜ ಮನವಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಕ್ರೈಸ್ತರ ಅಭಿವೃದ್ಧಿ ಸಮಿತಿಯನ್ನು ಜಾರಿಗೆ ತಂದಿತ್ತು. ಇದನ್ನು ಮೇಲ್ದರ್ಜೆಗೇರಿಸುವ ಮೂಲಕ ಕ್ರೈಸ್ತರ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿದರು.
ಶಿಕ್ಷಣ, ಆರೋಗ್ಯ ಸಾಮಾಜಿಕ ಕ್ಷೇತ್ರಗಳಲ್ಲಿ ಕ್ರೈಸ್ತ ಸಮುದಾಯವು ನೀಡುತ್ತಿರುವ ಪ್ರಾಮಾಣಿಕ ಸೇವೆಗಳನ್ನು ರಾಜಕೀಯ ಪಕ್ಷಗಳು ಪ್ರಶಂಸೆ ಮಾಡುತ್ತಾರೆ ಹೊರತು ರಾಜಕೀಯ ಸ್ಥಾನಮಾನ ಸರ್ಕಾರದ ಸೌಲಭ್ಯಗಳನ್ನು ನೀಡುವಲ್ಲಿ ಕಡೆಗಣಿಸುತ್ತಿದ್ದಾರೆ ಎಂದು ಆರೋಪಿಸಿದರು.
ವಿಧಾನಪರಿಷತ್ ಸದಸ್ಯ ಐವಾನ್ ಡಿಸೋಜ ಅವರಿಗೆ ಸಚಿವ ಸ್ಥಾನ ನೀಡಬೇಕು. 2018-19ರ ಬಜೆಟ್‍ನಲ್ಲಿ ಸುಮಾರು 2850 ಕೋಟಿ ರೂ. ಹೆಚ್ಚು ಹಣ ಮೀಸಲಿಟ್ಟಿದ್ದಾರೆ. ಈ ಹಣದಲ್ಲಿ ಸಮುದಾಯದ ಅಭಿವೃದ್ದಿಗೆ 850 ಕೋಟಿ ರೂ. ಮೀಸಲಿಡಬೇಕೆಂದು ಒತ್ತಾಯಿಸಿದರು.
ಅಭಿವೃದ್ದಿ ಮಂಡಳಿ ಸ್ಥಾಪನೆಯಾಗುವವರೆಗೂ ಕ್ರೈಸ್ತ ಅಭಿವೃದ್ದಿ ಸಮಿತಿಗೆ ಒಂದು ಅಥವಾ ಕೈಸ್ತ ಸಮುದಾಯದ ಎರಡು ಅಧಿಕಾರಿಗಳನ್ನು ನೇಮಕ ಮಾಡಬೇಕೆಂದು ಹೇಳಿದರು.