ವಾಷಿಂಗ್ಟನ್, ಜೂ. 4-ಭಾರತ ಮತ್ತು ಅಮೆರಿಕ ನಡುವಣ ಸದೃಢ ದ್ವಿಪಕ್ಷೀಯ ಮಹತ್ವದ ಪಾಲುದಾರಿಕೆ ಮತ್ತು ಸಹಭಾಗಿತ್ವವನ್ನು ಮುಂದುವರಿಸಲು ಉಭಯ ದೇಶಗಳು ನಿರ್ಧರಿಸಿವೆ. ಈ ಬೆಳವಣಿಗೆಯಿಂದ ಎರಡೂ ರಾಷ್ಟ್ರಗಳ ಸಂಬಂಧ ಮತ್ತಷ್ಟು ಬಲವರ್ಧನೆಗೆ ಸಹಕಾರಿಯಾಗಲಿದೆ.
ಸಿಂಗಪುರ್‍ನಲ್ಲಿ ಶನಿವಾರ ನಡೆದ 17ನೇ ಏಷ್ಯಾ ಭದ್ರತಾ ಶೃಂಗಸಭೆ (ಶ್ರಾಂಗಿ-ಲಾ ಸಂಬಾಷಣೆ) ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ರಕ್ಷಣಾ ಸಚಿವ ಜಿಮ್ಮ ಮ್ಯಾಟಿಸ್ ಮಹತ್ವದ ಸಮಾಲೋಚನೆ ಸಂದರ್ಭದಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಅಮೆರಿಕ ರಕ್ಷಣಾ ಇಲಾಖೆ-ಪೆಂಟಗನ್ ಈ ವಿಷಯವನ್ನು ಖಚಿತಪಡಿಸಿದೆ.
ಈ ಇಬ್ಬರು ನಾಯಕರು ಅಮೆರಿಕ-ಭಾರತ ನಡುವಣ ಸದೃಢ ದ್ವಿಪಕ್ಷೀಯ ಸಂಬಂಧಗಳ ಪ್ರಾಮುಖ್ಯತೆ ಬಗ್ಗೆ ಚರ್ಚಿಸಿದರು ಹಾಗೂ ಅಂತಾರಾಷ್ಟ್ರೀಯ ಕಾನೂನುಗಳು ಮತ್ತು ನೀತಿಗಳನ್ನು ಎತ್ತಿ ಹಿಡಿಯುವಲ್ಲಿ ಉಭಯ ದೇಶಗಳ ಪಾತ್ರದ ಬಗ್ಗೆಯೂ ಸಮಾಲೋಚನೆ ನಡೆಸಿದರು. ಅಲ್ಲದೇ ಮುಕ್ತ ಇಂಡೋ-ಪೆಸಿಫಿಕ್ ಸಂಬಂಧ ಹೊಂದುವ ಕುರಿತು ತೀರ್ಮಾನಿಸಿದರು ಎಂದು ರಕ್ಷಣಾ ಇಲಾಖೆ ವಕ್ತಾರ ಕ್ಯಾಪ್ಟನ್ ಜೆಫ್ ಡೇವಿಸ್ ತಿಳಿಸಿದ್ದಾರೆ.