ಬರಪೀಡಿತ ಪ್ರದೇಶಗಳ ದಾಹ ತಣಿಸುತ್ತದೆ ಕೆಸಿವ್ಯಾಲಿ ಏತನೀರಾವರಿ ಯೋಜನೆ…

 

ಬೆಂಗಳೂರು, ಜೂ.4-ಆಗದು ಎಂದು… ಕೈಲಾಗದು ಎಂದು ಕೈ ಕಟ್ಟಿ ಕುಳಿತರೆ… ಸಾಗದು ಕೆಲಸವು ಮುಂದೆ… ಎಂಬ ಹಾಡಿನ ಪ್ರತಿರೂಪದಂತಿದೆ ಕೆಸಿವ್ಯಾಲಿ ಏತನೀರಾವರಿ ಯೋಜನೆ.

ಶಿವನ ಜಡೆಯಿಂದ ಭಗೀರಥ ಭೂಮಿಗೆ ಗಂಗೆಯನ್ನು ಕರೆತಂದಂತೆ ಬರ ಪ್ರದೇಶಗಳ ಅಂತರ್ಜಲ ಮಟ್ಟ ವೃದ್ದಿಸುವ ಉದ್ದೇಶದಿಂದ ವ್ಯರ್ಥವಾಗಿ ಸಮುದ್ರಕ್ಕೆ ಹರಿದುಹೋಗುತ್ತಿದ್ದ ತ್ಯಾಜ್ಯ ನೀರನ್ನು ಸಂಸ್ಕರಿಸಿ ಬರಪೀಡಿತ ಪ್ರದೇಶಗಳ ದಾಹ ತಣಿಸುವುದೇ ಈ ಮಹತ್ ಯೋಜನೆಯ ಉದ್ದೇಶ.
ಕೋರಮಂಗಲ ಮತ್ತು ಚಲ್ಲಘಟ್ಟ ಕಣಿವೆಗಳ ಕೊಳಚೆ ನೀರನ್ನು ಸಂಸ್ಕರಿಸಿ ಕೋಲಾರ ಮತ್ತು ಚಿಕ್ಕಬಳ್ಳಾಪುರದ 134 ಕೆರೆಗಳಿಗೆ ಹರಿಸುವ ಉದ್ದೇಶದಿಂದ 28-05-2016ರಲ್ಲಿ 1280 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾದ ಕೆಸಿವ್ಯಾಲಿ ಕಾಮಗಾರಿ ಪೂರ್ಣಗೊಂಡಿರುವುದು ಆ ಭಾಗದ ರೈತರ ಮೊಗದಲ್ಲಿ ಹರ್ಷ ಮೂಡಿಸಿದೆ.

ಏನಿದು ಯೋಜನೆ:
ಬರಪೀಡಿತ ಪ್ರದೇಶಗಳಾದ ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ನೀರಿಗೆ ತತ್ವಾರ ಉಂಟಾಗಿತ್ತು. ಸತತ ಮಳೆ ವೈಫಲ್ಯದಿಂದ ಆ ಪ್ರದೇಶಗಳ ಅಂತರ್ಜಲ ಮಟ್ಟ 1500 ಅಡಿಗಳಿಗೆ ಕುಸಿದಿತ್ತು. ಅಂತರ್ಜಲ ಮಟ್ಟ ಕುಸಿದು ಬಿದ್ದ ಹಿನ್ನೆಲೆಯಲ್ಲಿ ನೀರಿನಲ್ಲಿ ಫೆÇ್ರೀ ಅಂಶ ಕಾಣಿಸಿಕೊಂಡು ಅಲ್ಲಿನ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿತ್ತು.
ಕೋಲಾರ ಮತ್ತು ಚಿಕ್ಕಬಳ್ಳಾಪುರದ ನೀರಿನ ಅಭಾವ ತಪ್ಪಿಸಬೇಕು ಎಂಬ ಉದ್ದೇಶದಿಂದ 2013ರಲ್ಲಿ ಬೆಂಗಳೂರಿನಲ್ಲಿ ವ್ಯರ್ಥವಾಗಿ ಹರಿದುಹೋಗುವ ಮಲೀನ ನೀರನ್ನು ಸಂಸ್ಕರಿಸಿ ಬರದ ಜಿಲ್ಲೆಗಳಿಗೆ ಹರಿಸಬೇಕು ಎಂಬುದೇ ಕೆಸಿವ್ಯಾಲಿ ಏತನೀರಾವರಿ ಯೋಜನೆಯ ಉದ್ದೇಶವಾಗಿತ್ತು.

ಅದರಂತೆ 2016ರಲ್ಲಿ ಕೋರಮಂಗಲ ಮತ್ತು ಚಲ್ಲಘಟ್ಟ ಕಣಿವೆಗಳಲ್ಲಿ ವ್ಯರ್ಥವಾಗಿ ಹರಿದು ಹೋಗುವ ತ್ಯಾಜ್ಯ ನೀರನ್ನು ಸಂಸ್ಕರಿಸಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಹರಿಸುವ ಕಾಮಗಾರಿ ಕೈಗೆತ್ತಿಕೊಳ್ಳಲಾಯಿತು.
ಪರಿಣಿತ ತಂಡದೊಂದಿಗೆ 2016ರಲ್ಲಿ ಕೈಗೆತ್ತಿಕೊಳ್ಳಲಾದ ಈ ಯೋಜನೆ ಇದೀಗ ಪೂರ್ಣಗೊಂಡಿದ್ದು , ಬರದ ಜಿಲ್ಲೆಗಳಿಗೆ ಸಂಸ್ಕರಿಸಿದ ನೀರು ಹರಿಸುವ ಮಹತ್ವದ ಕಾರ್ಯ ಆರಂಭಗೊಂಡಿದೆ.
ಸಂಸ್ಕರಣೆ ಹೇಗೆ:
ಕೋರಮಂಗಲ, ಚಲ್ಲಘಟ್ಟ ಕಣಿವೆಗಳಲ್ಲಿ ಪ್ರತಿನಿತ್ಯ 440 ದಶಲಕ್ಷ ಲೀಟರ್ ಮಲೀನ ನೀರು ವ್ಯರ್ಥವಾಗಿ ಹರಿದುಹೋಗುತ್ತಿದೆ. ಈ ನೀರನ್ನು ಸಂಸ್ಕರಿಸುವ ಉದ್ದೇಶದಿಂದ ಕೆಸಿವ್ಯಾಲಿ, ಬೆಳ್ಳಂದೂರು ಹಾಗೂ ಕಾಡುಬೀಸನಹಳ್ಳಿಯಲ್ಲಿ ಮೂರು ಸಂಸ್ಕರಣಾ ಘಟಕಗಳನ್ನು ಆರಂಭಿಸಲಾಗಿದೆ.
ಪ್ರತಿನಿತ್ಯ ಕೆಸಿವ್ಯಾಲಿಯಲ್ಲಿ 310, ಬೆಳ್ಳಂದೂರಿನಲ್ಲಿ 90 ಹಾಗೂ ಕಾಡುಬೀಸನಹಳ್ಳಿಯಲ್ಲಿ 40 ಎಂಎಲ್‍ಡಿ ನೀರನ್ನು ಸಂಸ್ಕರಿಸಿ, ಈ ಸಂಸ್ಕರಿತ ನೀರನ್ನು ಬೆಳ್ಳಂದೂರು ತ್ಯಾಜ್ಯ ಘಟಕದ ಸಮೀಪ ಸಂಗ್ರಹಿಸಿ ಅಲ್ಲಿಂದ ಕೋಲಾರದ ನರಸಾಪುರ ಕೆರೆಗೆ ಹರಿಸಲಾಗುವುದು.

ನೀರು ಹರಿಸುವುದು ಹೇಗೆ:
ಬೆಳ್ಳಂದೂರು ತ್ಯಾಜ್ಯ ಘಟಕದ ಸಮೀಪ ಸಂಗ್ರಹವಾಗುವ ಸಂಸ್ಕರಿತ ನೀರನ್ನು ಆರು ಪಂಪ್‍ಹೌಸ್‍ಗಳ ಮೂಲಕ ಹಾಗೂ ಏರು ಗುರುತ್ವಾಕರ್ಷಣ ಕೊಳವೆಗಳ ಮೂಲಕ ಕೋಲಾರದ ನರಸಾಪುರ ಕೆರೆಗೆ ಹರಿಸಲು ಕ್ರಮ ಕೈಗೊಳ್ಳಲಾಗಿದೆ.
124 ಕಿ.ಮೀ ದೂರದ ನರಸಾಪುರ ಕೆರೆಗೆ ಸಂಸ್ಕರಿತ ನೀರನ್ನು ಹರಿಸಲು ಬೃಹತ್ ಏರು ಗುರುತ್ವಾಕರ್ಷಣ ಕೊಳವೆಗಳನ್ನು ಅಳವಡಿಸಿರುವುದರ ಜೊತೆಗೆ ಸ್ವಾಭಾವಿಕ ನಾಲೆಗಳ ಮೂಲಕ ನೀರು ಹರಿಸಲಾಗುತ್ತಿದೆ.
ಯಾವ ಕೆರೆಗಳಿಗೆ ನೀರು:
ಕೋಲಾರ ಸಮೀಪದ ನರಸಾಪುರ ಕೆರೆ ತಲುಪುವ ಸಂಸ್ಕರಿತ ನೀರನ್ನು ರೀಚ್-1 ಮತ್ತು ರೀಚ್-2 ಯೋಜನೆಗಳ ಮೂಲಕ ಜಿಲ್ಲೆಯ 134 ಕೆರೆಗಳಿಗೆ ನೀರು ಹರಿಸುವುದು ಯೋಜನೆಯ ಉದ್ದೇಶ.

ಮುಳಬಾಗಿಲಿನ 31, ಶ್ರೀನಿವಾಸಪುರದ 22, ಕೋಲಾರದ 41, ಕೆಜಿಎಫ್‍ನ 2, ಬಂಗಾರಪೇಟೆಯ 10, ಮಾಲೂರಿನ 23 ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಐದು ಕೆರೆಗಳಿಗೆ ನೀರು ಹರಿಸಲು ತೀರ್ಮಾನಿಸಲಾಗಿದೆ.
ಪ್ರತಿನಿತ್ಯ ವ್ಯರ್ಥವಾಗಿ ಹರಿದುಹೋಗಿ ಸಮುದ್ರ ಸೇರುತ್ತಿದ್ದ ತ್ಯಾಜ್ಯ ನೀರು ಎರಡು ಜಿಲ್ಲೆಗಳ ಜೀವ ಸೆಲೆಗಳನ್ನಾಗಿಸುವಲ್ಲಿ ಸರ್ಕಾರ ಯಶಸ್ವಿಯಾಗಿರುವುದರಿಂದ ಕಳೆದ ಹಲವಾರು ದಶಕಗಳಿಂದ ನೀರಿಲ್ಲದೆ ಪರಿತಪಿಸುತ್ತಿದ್ದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ನೀರಿನ ಬವಣೆ ನೀಗಿಸುವ ಮೂಲಕ ರೈತರಿಗೆ ವರದಾನವಾಗಿ ಪರಿಣಮಿಸಿದೆ.

ಜಲಮೂಲವಿಲ್ಲದೆ ಕಂಗೆಟ್ಟಿದ್ದ ಆ ಎರಡು ಜಿಲ್ಲೆಗಳ 134 ಕೆರೆಗಳಿಗೆ ಹರಿಯಲಿರುವ ಸಂಸ್ಕರಿತ ನೀರು ಆ ಭಾಗದ ಅಂರ್ತಜಲ ಮಟ್ಟ ವೃದ್ಧಿಗೆ ಸಹಕಾರಿಯಾಗುವುದರಿಂದ ಭವಿಷ್ಯದಲ್ಲಿ ಆ ಎರಡೂ ಬರಡು ಜಿಲ್ಲೆಗಳಿಗೆ ನೀರಿನ ತತ್ವಾರ ಎದುರಾಗುವುದಿಲ್ಲ ಎಂದೇ ನಿರೀಕ್ಷಿಸಲಾಗಿದೆ.
ದಾಖಲೆಯೇ ಸರಿ:
ಯಾವುದೇ ನೀರಾವರಿ ಯೋಜನೆಗಳು ಸಕಾಲಕ್ಕೆ ಪೂರ್ಣಗೊಂಡ ಉದಾಹರಣೆಗಳೇ ಇಲ್ಲ. ಆದರೆ ಕೆಸಿವ್ಯಾಲಿ ಯೋಜನೆಯನ್ನು ಕೇವಲ ಎರಡು ವರ್ಷಗಳಲ್ಲೇ ಪೂರ್ಣಗೊಳಿಸಿದ ಕೀರ್ತಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲಬೇಕು.
2016 ಮೇ ತಿಂಗಳಿನಲ್ಲಿ ಆರಂಭವಾದ ಈ ಯೋಜನೆ 2018 ಮೇ ತಿಂಗಳಿನಲ್ಲಿ ಪೂರ್ಣಗೊಂಡಿರುವುದು ದಾಖಲೆಯೇ ಸರಿ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ