
ಆಗ್ರಾ: ಐತಿಹಾಸಿಕ ಸ್ಮಾರಕ ಮತ್ತು ಜಗತ್ತಿನ ಏಳು ಅದ್ಭುತಗಳಲ್ಲಿ ಒಂದಾದ ತಾಜ್ ಮಹಲ್ ಕಳೆಗುಂದುತ್ತಿದೆ ಎಂಬ ವಾದದ ನಡುವೆಯೇ ಕೇಂದ್ರ ಸಂಸ್ಕೃತಿ ಮತ್ತು ಪರಿಸರ ಸಚಿವಾಲಯ ತಾಜ್ನ ನೈಜ ಬಣ್ಣ ಪತ್ತೆಗೆ ವೈಜ್ಞಾನಿಕ ಅಧ್ಯಯನ ನಡೆಸಲು ಮುಂದಾಗಿದೆ.
ಕೇಂದ್ರ ಸಚಿವ ಮಹೇಶ್ ಶರ್ಮಾ ತಾಜ್ ಮಹಲ್ ಬಣ್ಣದ ಬಗ್ಗೆ ಅಧ್ಯಯನ ನಡೆಸಲು ನಿರ್ಧರಿಸಿದ್ದು, ನಂತರ ವರದಿಯನ್ನು ಸುಪ್ರೀಂಕೋರ್ಟ್ಗೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ತಾಜ್ ಅಮೃತಶಿಲೆಯ ಬಣ್ಣ ಮೊದಲು ಹಳದಿಯಾಗಿತ್ತು, ನಂತರದಲ್ಲಿ ಅದು ಕಂದು ಮತ್ತು ಹಸಿರು ಬಣ್ಣಕ್ಕೆ ತಿರುಗುತ್ತಿದೆ ಎಂದು ಅರ್ಜಿದಾರ ಎಂ. ಸಿ. ಮೆಹ್ತಾ ಸಲ್ಲಿಸಿದ ಫೋಟೋಗಳನ್ನು ಗಮನಿಸಿದ ಬಳಿಕ ನ್ಯಾಯಾಧೀಶರುಗಳಾದ ಎಂ. ಬಿ. ಲೋಕೂರ್ ಮತ್ತು ದೀಪಕ್ ಗುಪ್ತಾ ಅಭಿಪ್ರಾಯಪಟ್ಟಿದ್ದರು. ಅಲ್ಲದೆ ಬಣ್ಣ ಬದಲಾಗುತ್ತಿರುವ ಕುರಿತು ಸರಕಾರದ ಪರ ವಕೀಲ ಹೆಚ್ಚುವರಿ ಸಾಲಿಸಿಟರ್ ಜನರಲ್ ಎ. ಎನ್. ಎಸ್. ನಾಡಕರ್ಣಿ ಅವರನ್ನು ಸುಪ್ರೀಂ ಪೀಠ ಪ್ರಶ್ನಿಸಿತ್ತು.
ಹೀಗಾಗಿ ತಾಜ್ಮಹಲ್ ಅನ್ನು ಕಲರ್ ಸ್ಟೀರಿಯೋಗ್ರಫಿ ತಂತ್ರಜ್ಞಾನದ ಮೂಲಕ ಸ್ವಚ್ಛಗೊಳಿಸಿದ ನಂತರ ಪ್ರಸ್ತುತ ಬಣ್ಣದ ಕುರಿತು ಸುಪ್ರೀಂಗೆ ವರದಿ ನೀಡಲು ಸರಕಾರ ನಿರ್ಧರಿಸಿದೆ ಎಂದು ಸಚಿವ ಶರ್ಮಾ ಹೇಳಿದ್ದಾರೆ.