ನವದೆಹಲಿ:ಜೂ-4:ಒಂದೇ ಕುಟುಂಬದ 7 ಜನರನ್ನು ಹತ್ಯೆ ಮಾಡಿದ್ದ ಅಪರಾಧಿ ಕ್ಷಮೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ರಾಷ್ಟ್ರಪತಿ ರಮಾನಾಥ್ಜ್ ಕೋವಿಂದ್ ತಿರಸ್ಕರಿಸಿದ್ದಾರೆ.
ಇದು ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ರಾಮನಾಥ್ ಕೋವಿಂದ್ ತಿರಸ್ಕರಿಸಿರುವ ಮೊದಲ ಕ್ಷಮಾದಾನ ಅರ್ಜಿಯಾಗಿದೆ.
ಒಂದೇ ಕುಟುಂಬದ 7 ಜನರನ್ನು ಹತ್ಯೆ ಮಾಡಿದ್ದ ಬಿಹಾರ ಮೂಲದ ಜಗತ್ ರಾಯ್ ಕ್ಷಮಾದಾನ ಕೋರಿ ರಾಷ್ಟ್ರಪತಿಗೆ ಅರ್ಜಿ ಸಲ್ಲಿಸಿದ್ದ. ಈ ಅರ್ಜಿಯನ್ನು ರಾಷ್ಟ್ರಪತಿಯವರು ತಿರಸ್ಕರಿಸಿದ್ದಾರೆ.
ವಿಶೇಷ ವೆಂದರೆ ಈ ಪ್ರಕರಣವು ಕೋವಿಂದ್ ಹಾಲಿ ಹುದ್ದೆ ನಿರ್ವಹಿಸುವುದಕ್ಕೆ ಮುನ್ನ ರಾಜ್ಯಪಾಲ ರಾಗಿದ್ದ ಬಿಹಾರಕ್ಕೆ ಸೇರಿದ್ದಾಗಿದ್ದು, ಬಿಹಾರದ ವೈಶಾಲಿ ಜಿಲ್ಲೆಯ ರಾಮ್ಪುರ್ ಶ್ಯಾಮಚಂದ್ ಗ್ರಾಮದಲ್ಲಿ 2006 ರ ಜನವರಿ 1 ರಂದು ಜಗತ್ ರಾಯ್ ಒಂದೇ ಕುಟುಂಬದ 7 ಜನರನ್ನು ಹತ್ಯೆ ಮಾಡಿದ್ದ.
2013ರಲ್ಲಿ ಸುಪ್ರೀಂಕೋರ್ಟ್ ಬಿಹಾರದ ಜಗತ್ ರಾಯ್ಗೆ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ಎತ್ತಿ ಹಿಡಿದಿತ್ತು. ಬಳಿಕ ಈತ ಕ್ಷಮಾದಾನ ಕೋರಿ 2017ರಲ್ಲೇ ಅರ್ಜಿ ಸಲ್ಲಿಸಿದ್ದ. ಆದರೆ, 14ನೇ ರಾಷ್ಟ್ರಪತಿ ಆಯ್ಕೆ ಪ್ರಕ್ರಿಯೆ ಜಾರಿಯಾಗಿದ್ದ ಹಿನ್ನೆಲೆಯಲ್ಲಿ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ರಾಯ್ ನ ಅರ್ಜಿಯ ಕುರಿತು ಯಾವುದೇ ನಿರ್ಧಾರ ತೆಗೆದುಕೊಂಡಿರಲಿಲ್ಲ. ರಾಮನಾಥ ಕೋವಿಂದ್ ಅವರು ಅಧಿಕಾರ ಸ್ವೀಕರಿಸಿದ ನಂತರ ರಾಯ್ ಅರ್ಜಿಯ ಕುರಿತು ಗೃಹ ಸಚಿವಾಲಯ ಮತ್ತು ಕಾನೂನು ತಜ್ಞರ ಸಲಹೆ ಪಡೆದು ಅರ್ಜಿಯನ್ನು ತಿರಸ್ಕರಿಸಲು ತೀರ್ಮಾನ ತೆಗೆದುಕೊಂಡಿದ್ದಾರೆ.
ಕಾನೂನು ಹಾಗೂ ಇತರ ಪರಿಣಿತರ ಜೊತೆ 10 ತಿಂಗಳವರೆಗೆ ಸಮಾಲೋಚನೆ ನಡೆಸಿ ರಾಷ್ಟ್ರಪತಿ ಕೋವಿಂದ್ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಗೃಹ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.