ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ರಿಂದ ವಿಧಾನಸೌಧದಲ್ಲಿ ಕಚೇರಿ ಪೂಜೆ

 

ಬೆಂಗಳೂರು, ಜೂ.3-ಕಳೆದ ಹನ್ನೆರಡು ದಿನಗಳಿಂದ ಖಾತೆ ರಹಿತ ಉಪಮುಖ್ಯಮಂತ್ರಿಯಾಗಿರುವ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಭಾನುವಾರ ರಜಾದಿನದಂದು ವಿಧಾನಸೌಧದಲ್ಲಿ ಕಚೇರಿ ಪೂಜೆ ಮಾಡಿದ್ದಾರೆ.

ಪರಮೇಶ್ವರ್ ಅವರಿಗೆ ವಿಧಾನಸೌಧದ ಮೂರನೇ ಮಹಡಿಯ 327 ಮತ್ತು 328 ಸಂಖ್ಯೆಯ ಕೊಠಡಿಗಳು ಮಂಜೂರಾಗಿವೆ. ಇಂದು ಬೆಳಗ್ಗೆ ಪತ್ನಿ ಕನ್ನಿಕಾ ಪರಮೇಶ್ವರ್ ಅವರೊಂದಿಗೆ ವಿಧಾನಸೌಧಕ್ಕೆ ಆಗಮಿಸಿದ ಪರಮೇಶ್ವರ್ ಅವರು ನೂತನ ಕಚೇರಿಯ ಪೂಜೆ ನೆರವೇರಿಸಿದರು.

ಈ ವೇಳೆ ಪರಮೇಶ್ವರ್ ಅವರ ಆಪ್ತರಾದ ಶಾಸಕ ಎಸ್.ಟಿ.ಸೋಮಶೇಖರ್, ರಾಜ್ಯಸಭಾ ಸದಸ್ಯ ಜೆ.ಸಿ.ಚಂದ್ರಶೇಖರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಘೋರ್ಪಡೆ, ಎ.ಸಿ.ಶ್ರೀನಿವಾಸ್ ಮತ್ತಿತರರು ಹಾಜರಿದ್ದರು.
ಭಾನುವಾರ ರಜಾ ದಿನವಾಗಿದ್ದರಿಂದ ವಿಧಾನಸೌಧಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿತ್ತು. ಹೀಗಾಗಿ ಉಪಮುಖ್ಯಮಂತ್ರಿಯವರ ನೂತನ ಕಚೇರಿ ಪೂಜೆ ವೇಳೆ ಹೆಚ್ಚಿನ ಜನ ಭಾಗವಹಿಸಲು ಸಾಧ್ಯವಾಗಿಲ್ಲ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ