ಬೆಂಗಳೂರು, ಜೂ.3-ರಾಜ್ಯ ವಿಧಾನಪರಿಷತ್‍ನ ಹನ್ನೊಂದು ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದ್ದು, ನಾಳೆ ಮಧ್ಯಾಹ್ನ ಅಧಿಕೃತವಾಗಿ ಪ್ರಕಟವಾಗಲಿದೆ.
ಬಿಜೆಪಿ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ ಎಸ್.ರುದ್ರೇಗೌಡ, ಡಾ.ತೇಜಸ್ವಿನಿ ಗೌಡ, ರಘುನಾಥರಾವ್ ಮಲ್ಕಾಪುರೆ, ಕೆ.ಪಿ.ನಂಜುಂಡಿ ವಿಶ್ವಕರ್ಮ, ಎನ್.ರವಿಕುಮಾರ್, ಕಾಂಗ್ರೆಸ್ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ ಕೆ.ಗೋವಿಂದರಾಜ್, ಸಿ.ಎಂ.ಇಬ್ರಾಹಿಂ, ಅರವಿಂದಕುಮಾರ್ ಅರಳಿ, ಕೆ.ಹರೀಶ್‍ಕುಮಾರ್, ಜೆಡಿಎಸ್ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ ಬಿ.ಎಂ.ಫಾರೂಕ್, ಎಸ್.ಎಲ್.ಧರ್ಮೇಗೌಡ ಅವರು ಮೇಲ್ಮನೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮೇ 31 ರಂದು ಈ ಹನ್ನೊಂದು ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ವಾಪಸ್ ಪಡೆಯಲು ನಾಳೆ ಕಡೆಯ ದಿನವಾಗಿದೆ. ನಾಮಪತ್ರ ಹಿಂಪಡೆಯುವ ಗಡುವು ಮುಗಿದ ಬಳಿಕ ವಿಧಾನಪರಿಷತ್ ಚುನಾವಣೆಯ ಚುನಾವಣಾಧಿಕಾರಿ, ವಿಧಾನಸಭೆ ಜಂಟಿ ಕಾರ್ಯದರ್ಶಿ ಎಂ.ಎಸ್.ಕುಮಾರಸ್ವಾಮಿ ಅವರು ಅವಿರೋಧವಾಗಿ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ಅಧಿಕೃತವಾಗಿ ನಾಳೆ ಪ್ರಕಟಿಸಲಿದ್ದಾರೆ.
ವಿಧಾನಸಭೆಯಿಂದ ವಿಧಾನಪರಿಷತ್‍ನ 11 ಸದಸ್ಯ ಸ್ಥಾನಗಳಿಗೆ ಭಾರತದ ಚುನಾವಣಾ ಆಯೋಗ ಚುನಾವಣೆ ಘೋಷಣೆ ಮಾಡಿತ್ತು. ಜೂ.17 ರಂದು ಮೇಲ್ಮನೆ ಸದಸ್ಯ ಸ್ಥಾನದಿಂದ ಬಿ.ಜೆ.ಪುಟ್ಟಸ್ವಾಮಿ, ಎಂ.ಆರ್.ಸೀತಾರಾಮ್, ಮೋಟಮ್ಮ, ಡಿ.ಎಸ್.ವೀರಯ್ಯ, ಸೈಯ್ಯದ್ ಮುದೀರ್ ಆಗಾ, ಸೋಮಣ್ಣ ಬೇವಿನಮರದ್, ರಘುನಾಥರಾವ್ ಮಲ್ಕಾಪುರೆ, ಭಾನುಪ್ರಕಾಶ್, ಸಿ.ಎಂ.ಇಬ್ರಾಹಿಂ, ಕೆ.ಗೋವಿಂದರಾಜ್ ಹಾಗೂ ಬಿ.ಎಸ್.ಸುರೇಶ್ ಅವರು ನಿವೃತ್ತಿಯಾಗಲಿದ್ದಾರೆ.