ಬೆಂಗಳೂರು, ಜೂ.3- ಕಾಂಗ್ರೆಸ್-ಜೆಡಿಎಸ್ ಜತೆಗೂಡಿ ಸಮ್ಮಿಶ್ರ ಸರ್ಕಾರ ರಚನೆ ಮಾಡಿದ ಬೆನ್ನಲ್ಲೇ ವಿಧಾನಪರಿಷತ್‍ನಲ್ಲೂ ಉಭಯ ಪಕ್ಷಗಳ ನಡುವೆ ಮೈತ್ರಿ ಮುಂದುವರೆಸುವ ಬಗ್ಗೆ ಚಿಂತನೆ ನಡೆದಿದೆ.
ಮೇಲ್ಮನೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರ ಸಂಖ್ಯಾಬಲ ಬಿಜೆಪಿಗಿಂತ ಹೆಚ್ಚಾಗಿದ್ದು, ಸಭಾಪತಿ, ಉಪಸಭಾಪತಿ ಸ್ಥಾನಗಳಲ್ಲೂ ಬದಲಾವಣೆ ತರಲು ಉದ್ದೇಶಿಸಲಾಗಿದೆ.
ಸಭಾಪತಿ ಸ್ಥಾನ ಜೆಡಿಎಸ್ ಪಕ್ಷಕ್ಕೆ, ಉಪಸಭಾಪತಿ ಸ್ಥಾನವನ್ನು ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟುಕೊಡುವ ಬಗ್ಗೆಯೂ ಗಂಭೀರ ಚಿಂತನೆಯನ್ನು ಉಭಯ ಪಕ್ಷಗಳ ನಾಯಕರು ಮಾಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ವಿಧಾನಸಭೆ ಸಭಾಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್ ಪಕ್ಷಕ್ಕೆ ನೀಡಲಾಗಿದೆ. ಕೆ.ಆರ್.ರಮೇಶ್‍ಕುಮಾರ್ ಅವರು ಸಭಾಧ್ಯಕ್ಷರಾಗಿ ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದಾರೆ.
ವಿಧಾನಸಭೆಯಲ್ಲಿ ಸಭಾಧ್ಯಕ್ಷರ ಸ್ಥಾನವನ್ನು ಕಾಂಗ್ರೆಸ್‍ಗೆ ಬಿಟ್ಟುಕೊಟ್ಟಿರುವುದರಿಂದ ಮೇಲ್ಮನೆ ಸಭಾಪತಿ ಸ್ಥಾನವನ್ನು ಜೆಡಿಎಸ್ ಕೇಳುತ್ತಿದೆ ಎನ್ನಲಾಗಿದೆ.
ಪರಿಷತ್‍ನ ಹಿರಿಯ ಸದಸ್ಯರಾದ ಜೆಡಿಎಸ್‍ನ ಬಸವರಾಜ ಹೊರಟ್ಟಿ ಅವರನ್ನು ಸಭಾಪತಿಯನ್ನಾಗಿ ಮಾಡಲು ಉದ್ದೇಶಿಸಲಾಗಿದೆ. ಪ್ರಸ್ತುತ ಉಪಸಭಾಪತಿಯಾಗಿರುವ ಮರಿತಿಬ್ಬೇಗೌಡ ಅವರಿಗೆ ಮೇಲ್ಮನೆಯಲ್ಲಿ ಸರ್ಕಾರದ ಮುಖ್ಯ ಸಚೇತಕ ಸ್ಥಾನ ನೀಡುವ ಸಾಧ್ಯತೆಗಳಿವೆ. ಹೀಗಾಗಿ ಮರಿತಿಬ್ಬೇಗೌಡ ಅವರು ಉಪಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಿ ತೆರವು ಮಾಡಿಕೊಡಲಿದ್ದಾರೆ. ಈ ಬಗ್ಗೆ ಚರ್ಚೆಗಳು ಉನ್ನತ ಮಟ್ಟದಲ್ಲಿ ನಡೆಯುತ್ತಿವೆ.
ಜುಲೈ ತಿಂಗಳ ವೇಳೆಗೆ ವಿಧಾನಪರಿಷತ್‍ನಲ್ಲಿ ರಾಜಕೀಯ ಪಕ್ಷಗಳ ಸದಸ್ಯರ ಸಂಖ್ಯಾಬಲದಲ್ಲಿ ಏರಿಳಿತಗಳು ಉಂಟಾಗಲಿವೆ. ಹೀಗಾಗಿ ಬಿಜೆಪಿಯಿಂದ ಸಭಾಪತಿ ಸ್ಥಾನ ಕೈ ತಪ್ಪಿ ಆಡಳಿತ ಪಕ್ಷಗಳಿಗೆ ದೊರೆಯುವ ಸಾಧ್ಯತೆಗಳು ಹೆಚ್ಚಾಗಿವೆ.