ಬೆಂಗಳೂರು, ಜೂ.3- ವ್ಯಾಪಾರ ವಹಿವಾಟಿನ ದ್ವೇಷದ ಹಿನ್ನೆಲೆಯಲ್ಲಿ ಉದ್ಯಮಿ ಕನ್ನಯ್ಯಲಾಲ್ ಅವರ ಮೇಲೆ ಗುಂಡು ಹಾರಿಸಿ ಕೊಲೆಗೆ ಪ್ರಯತ್ನಿಸಲಾಗಿದೆ ಎಂದು ಆಗ್ನೇಯ ವಿಭಾಗದ ಪೆÇಲೀಸರು ಶಂಕಿಸಿದ್ದಾರೆ.
ಆರೋಪಿಗಳ ಸುಳಿವಿದೆ. ಆದಷ್ಟು ಬೇಗ ಅವರನ್ನು ಬಂಧಿಸುತ್ತೇವೆ ಎಂದು ಪೂರ್ವ ವಿಭಾಗದ ಹೆಚ್ಚುವರಿ ಪೆÇಲೀಸ್ ಆಯುಕ್ತ ಸೀಮಂತ್‍ಕುಮಾರ್ ಸಿಂಗ್ ತಿಳಿಸಿದ್ದಾರೆ.
ಗುಂಡು ಹಾರಿಸಿ ಪರಾರಿಯಾಗಿರುವ ದುಷ್ಕರ್ಮಿಗಳ ಬಂಧನಕ್ಕೆ ಸೀಮಂತ್‍ಕುಮಾರ್ ಸಿಂಗ್ ಅವರು ಆಗ್ನೇಯ ವಿಭಾಗದ ಡಿಸಿಪಿ ಡಾ.ಬೋರಲಿಂಗಯ್ಯ ಅವರ ನೇತೃತ್ವದಲ್ಲಿ ಮೂರು ತಂಡಗಳನ್ನು ರಚಿಸಿದ್ದಾರೆ.
ಈ ತಂಡಗಳು ನಿನ್ನೆಯಿಂದಲೇ ಕಾರ್ಯಾಚರಣೆ ನಡೆಸಿ ಆರೋಪಿಗಳ ಬಗ್ಗೆ ಕೆಲವು ಮಾಹಿತಿಗಳನ್ನು ಕಲೆ ಹಾಕಿವೆ. ಗುಂಡೇಟಿನಿಂದ ಗಾಯಗೊಂಡಿರುವ ಉದ್ಯಮಿ ಕನ್ನಯ್ಯಲಾಲ್ ಮತ್ತು ಅವರ ಪುತ್ರನಿಂದಲೂ ತನಿಖಾ ತಂಡ ಕೆಲವು ಮಾಹಿತಿಗಳನ್ನು ಪಡೆದುಕೊಂಡಿವೆ.
ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕನ್ನಯ್ಯಲಾಲ್ ಅವರಿಗೆ ನಿನ್ನೆಯೇ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಅವರು ಗುಣಮುಖರಾಗುತ್ತಿದ್ದಾರೆ ಎಂದು ಡಿಸಿಪಿ ಡಾ.ಬೋರಲಿಂಗಯ್ಯ ತಿಳಿಸಿದ್ದಾರೆ.
ನಿನ್ನೆ ಮಧ್ಯಾಹ್ನ ಸುಮಾರು ಎರಡು ಗಂಟೆ ಸಮಯದಲ್ಲಿ ಹೊಸೂರು ರಸ್ತೆಯ ರಹೆಜಾ ಆರ್ಕೆಡ್‍ನಲ್ಲಿರುವ ಫಾರ್ಮ್ ಇಂಡಿಯಾ ಇಂಪೆಕ್ಸ್ ಕಂಪೆನಿ ಕಚೇರಿಗೆ ಎರಡು ಬೈಕ್‍ಗಳಲ್ಲಿ ಬಂದ ಮೂವರು ದುಷ್ಕರ್ಮಿಗಳು ಮಾತಿನ ಚಕಮಕಿ ನಡೆಸಿ ಕನ್ನಯ್ಯಲಾಲ್ ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದರು.
ದಾಳಿಯ ಸಂದರ್ಭದಲ್ಲಿ ಕನ್ನಯ್ಯಲಾಲ್ ಅವರು ಟೇಬಲ್ ಕೆಳಗೆ ಹೋಗಿ ಬಚಾವಾಗಲು ಯತ್ನಿಸಿದರೂ ಅವರ ತಲೆಗೆ ಒಂದು ಗುಂಡು ತಗುಲಿ ತೀವ್ರವಾಗಿ ಗಾಯಗೊಂಡರು. ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.