ರಾಜಕೀಯ ಪಕ್ಷಗಳು ಸೋಲನ್ನು ಒಪ್ಪಿಕೊಳ್ಳಲು ಸಿದ್ದವಿಲ್ಲ; ತಾವು ಸೋತಾಗಲೆಲ್ಲ ಇವಿಎಂಗಳನ್ನೇ ದೂಷಿಸುತ್ತವೆ: ಮುಖ್ಯ ಚುನಾವಣೆ ಆಯುಕ್ತ ಓಂ ಪ್ರಕಾಶ್‌ ರಾವತ್‌ ಟೀಕೆ

ಕೋಲ್ಕತ:ಜೂ-2: ರಾಜಕೀಯ ಪಕ್ಷಗಳು ಸೋಲನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲ; ತಮ್ಮ ಸೋಲಿಗೆ ಯಾರನ್ನಾದರೂ ದೂಷಿಸುವುದು ಅವುಗಳ ಪ್ರವೃತ್ತಿಯಾಗಿದೆ ಹಾಗಾಗಿ ರಾಜಕೀಯ ಪಕ್ಷಗಳು ಸೋತಾಗಲೆಲ್ಲ ಇವಿಎಂಗಳನ್ನೇ ದೂಷಿಸುತ್ತ ಅವುಗಳನ್ನು ಬಲಿಪಶು ಮಾಡುತ್ತಿವೆ ಎಂದು ಮುಖ್ಯ ಚುನಾವಣೆ ಆಯುಕ್ತ ಓಂ ಪ್ರಕಾಶ್‌ ರಾವತ್‌ ಟೀಕಿಸಿದ್ದಾರೆ.

ಇವಿಎಂ ವ್ಯವಸ್ಥೆಯಲ್ಲಿ ಯಾವುದೇ ದೋಷವಿಲ್ಲ. ಯಾವುದೇ ಸಂದರ್ಭದಲ್ಲಿ ದೋಷ ಕಂಡು ಬಂದರೆ ನಾವು ಅದನ್ನು ಕೂಡಲೇ ಸರಿಪಡಿಸುತ್ತೇವೆ. ಕಳೆದ ವರ್ಷದ ಜುಲೈನಲ್ಲಿ ಸರ್ವಪಕ್ಷಗಳ ಸಭೆ ಕರೆದು ಇವಿಎಂಗಳ ಜತೆಗೆ ತಾಳೆ ನೋಡಬಹುದಾದ ವೆರಿಫಯೇಬಲ್‌ ಪೇಪರ್‌ ಆಡಿಟ್‌ ಟ್ರಯಲ್‌ ಯಂತ್ರಗಳನ್ನೂ(ವಿವಿಪ್ಯಾಟ್‌) ಬಳಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿತ್ತು.ಮತದಾನ ಪ್ರಕ್ರಿಯೆಯಲ್ಲಿ ಹೆಚ್ಚಿನ ಪಾರದರ್ಶಕತೆ ತರಲು ವಿವಿಪ್ಯಾಟ್‌ ಗಳನ್ನು ಬಳಸಲಾಗುತ್ತಿದೆ. ಇಷ್ಟು ದೊಡ್ಡ ಸಂಖ್ಯೆಯ ಮತದಾರರನ್ನು ಹೊಂದಿದ್ದರೂ ಕೆಲವೇ ಗಂಟೆಗಳಲ್ಲಿ ಚುನಾವಣೆ ಫಲಿತಾಂಶಗಳನ್ನು ಸಮರ್ಪಕವಾಗಿ ಪ್ರಕಟಿಸಲು ಇವಿಎಂಗಳಿಂದಾಗಿ ಸಾಧ್ಯವಾಗಿದೆ ಎಂದರು.

ಇದೇವೇಳೆ ಮುಂದಿನ ಚುನಾವಣೆಗಳಲ್ಲಿ ಹಳೆಯ ಪೇಪರ್‌ ಬ್ಯಾಲೆಟ್‌ ಪದ್ಧತಿಗೆ ಮರಳುವ ಸಾಧ್ಯತೆಯನ್ನು ಅವರು ತಳ್ಳಿಹಾಕಿದರು. ಅಲ್ಲದೇ ಲೋಕಸಭೆಗೆ ಅವಧಿಪೂರ್ವ ಚುನಾವಣೆ ನಡೆಸುವ ಬಗ್ಗೆ ಸರಕಾರದಿಂದ ಯಾವುದೇ ಸೂಚನೆ ಬಂದಿಲ್ಲ ಎಂದೂ ಅವರು ಸ್ಪಷ್ಟಪಡಿಸಿದರು.

ಚುನಾವಣೆ ಆಯೋಗವು ಯಾವುದೇ ಸದನದ ಅವಧಿ ಪೂರ್ಣಗೊಳ್ಳುವುದಕ್ಕೆ 6 ತಿಂಗಳ ಮುಂಚಿತವಾಗಿ ಚುನಾವಣೆ ಅಧಿಸೂಚನೆ ಹೊರಡಿಸಲು ಕಾನೂನುಬದ್ಧ ಅಧಿಕಾರ ಹೊಂದಿದೆ. ಆಯೋಗ ಇದಕ್ಕೆ ಬದ್ಧವಾಗಿರಬೇಕಾಗುತ್ತದೆ. ನಾವು ಕಾನೂನಿನಂತೆ ನಡೆದುಕೊಳ್ಳುತ್ತೇವೆ ಎಂದು ರಾವತ್‌ ತಿಳಿಸಿದರು.

2015ರಲ್ಲಿ ಕೇಂದ್ರ ಸರಕಾರವು ರಾಜ್ಯ ಮತ್ತು ಕೇಂದ್ರ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸುವ ಬಗ್ಗೆ ಪ್ರಸ್ತಾವ ಸಲ್ಲಿಸಿತ್ತು. ‘ಆಯೋಗ ಈ ಕುರಿತು ಎಲ್ಲ ಸಲಹೆಗಳನ್ನು ಸರಕಾರಕ್ಕೆ ನೀಡಿದೆ. ಇದಕ್ಕೆ ಸಂವಿಧಾನ ತಿದ್ದುಪಡಿ ಹಾಗೂ ಕಾನೂನಿನ ಬದಲಾವಣೆ ಅಗತ್ಯ. ಅಲ್ಲದೆ ಇತರ ಪೂರಕ ವ್ಯವಸ್ಥೆಗಳನ್ನೂ ಮಾಡಿಕೊಳ್ಳಬೇಕಿದೆ. ನಾವು ಸಲಹೆ ನೀಡಿಯಾಗಿದೆ. ನಂತರ ಸರಕಾರ ಏನು ಮಾಡಿದೆಯೋ ನಮಗೆ ತಿಳಿದಿಲ್ಲ’ ಎಂದು ಅವರು ನುಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ