ಆಡಳಿತದಲ್ಲಿನ ದುಂದುವೆಚ್ಚಕ್ಕೆ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಕಡಿವಾಣ: ವಿಶೇಷ ವಿಮಾನದ ಪ್ರಯಾಣ, ಹೊಸವಾಹನ ಖರೀದಿಗೆ ಬ್ರೇಕ್

ಬೆಂಗಳೂರು:ಜೂ-3: ಆಡಳಿತದಲ್ಲಿನ ದುಂದುವೆಚ್ಚಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಅನಗತ್ಯ ಖರ್ಚು-ವೆಚ್ಹಕ್ಕೆ ಬ್ರೇಕ್ ಹಾಕಿದ್ದಾರೆ. ಈ ನಿಟ್ಟಿನಲ್ಲಿ ಪಂಚಸೂತ್ರವನ್ನು ಹೆಣೆದಿದ್ದಾರೆ.

ಅನಗತ್ಯವಾಗಿ ವಿಶೇಷ ವಿಮಾನ ಬಳಸದಂತೆ ಕ್ರಮ ಕೈಗೊಂಡಿದ್ದು, ಸ್ವತ: ತಾವೇ ತುರ್ತು ಸಂದರ್ಭದಲ್ಲಿ ಮಾತ್ರ ವಿಶೇಷ ವಿಮಾನ ಬಳಸಲು ನಿರ್ಧರಿಸಿದ್ದಾರೆ. ಇದಕ್ಕೆ ಪುಷ್ಠಿ ನೀಡುವಂತೆ ಕಳೆದ ವಾರ ದೆಹಲಿಗೆ ತೆರಳುವಾಗಲೂ ವಿಶೇಷ ವಿಮಾನ ಬಳಸದೇ, ಸಾಮಾನ್ಯ ವಿಮಾನದಲ್ಲಿ ಸಂಚರಿಸಿದ್ದರು. ಇದರಿಂದ ಉಳಿತಾಯವಾದ ಲಕ್ಷಾಂತರ ರೂ. ಮೊತ್ತದ ವಿವರ ಕೂಡ ಮಾಧ್ಯಮದ ಮುಂದೆ ವಿವರಿಸಿದ್ದರು.

ಇದೀಗ ವೆಚ್ಚ ಕಡಿವಾಣಕ್ಕೆ ತಮ್ಮಿಂದಲೇ ವಿಶೇಷ ವಿಮಾನ ಬಳಕೆ ನಿಯಂತ್ರಿಸಿಕೊಂಡಿರುವ ಅವರು, ಆರ್ಥಿಕ ಭದ್ರತೆ ಕಾಯ್ದುಕೊಳ್ಳಲು ಈ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಬೊಕ್ಕಸಕ್ಕೆ ಆಗುತ್ತಿರುವ ವೆಚ್ಚದ ನಿಯಂತ್ರಣಕ್ಕೆ ಇವರು ಈ ನಿರ್ಧಾರ ಕೈಗೊಂಡಿದ್ದಾರೆ. ತಮ್ಮ ಸಹಿತ ಎಲ್ಲರಿಗೂ ವಿಶೇಷ ವಿಮಾನದಲ್ಲಿ ಸಂಚರಿಸುವುದಕ್ಕೆ ಕತ್ತರಿ ಹಾಕಿದ್ದಾರೆ.

ಸಚಿವರು, ನಿಗಮ ಮಂಡಳಿ ಅಧ್ಯಕ್ಷರು, ಅಧಿಕಾರಿಗಳಿಗೂ ಹೊಸ ಕಾರು ನೀಡದಿರಲು ನಿರ್ಧರಿಸಿದ್ದಾರೆ. ಹೊಸ ಕಾರು ಖರೀದಿಗೆ ಪೂರ್ಣವಿರಾಮ ಹಾಕಿದ್ದಾರೆ. ವಿಧಾನಸೌಧ, ಶಾಸಕರ ಕಚೇರಿ, ಮನೆ ನವೀಕರಣಕ್ಕೂ ಕತ್ತರಿ ಹಾಕಿದ್ದಾರೆ.

ಮುಖ್ಯಮಂತ್ರಿ ಬೆಂಗಾವಲು ಪಡೆಯನ್ನೂ ಕಡಿತಗೊಳಿಸಲು ನಿರ್ಧರಿಸಿದ್ದಾರೆ. ಸಿಎಂ ಕಚೇರಿಯಿಂದಲೂ ಅನಗತ್ಯ ಸಿಬ್ಬಂದಿಗೆ ಗೇಟ್‍ಪಾಸ್ ನೀಡಿದ್ದಾರೆ.

ಸರ್ಕಾರಿ ಬಂಗಲೆ, ಕಾರನ್ನು ಕುಮಾರಸ್ವಾಮಿ ನಿರಾಕರಿಸಿದ್ದು, ಸ್ವಂತ ಮನೆ, ಕಾರು ಬಳಸುತ್ತಿದ್ದಾರೆ. ಈ ಮೂಲಕ ಸಾಕಷ್ಟು ವೆಚ್ಚಕ್ಕೆ ಕಡಿವಾಣ ಹಾಕಿ ರಾಜ್ಯದ ಬೊಕ್ಕಸಕ್ಕೆ ಹಣ ಉಳಿಸುವುದು, ಆರ್ಥಿಕ ಸ್ಥಿರತೆಗೆ ಒತ್ತು ಕೊಡುವುದು ಸಿಎಂ ಉದ್ದೇಶವಾಗಿದೆ.

ಸಿಎಂ ಬೆಂಗಾವಲಿಗೆ 10-15 ವಾಹನ ಹಾಗೂ ಸರಿಸುಮಾರು 100 ಸಿಬ್ಬಂದಿ ನಿಯೋಜಿತರಾಗಿರುತ್ತಾರೆ. ಕಚೇರಿಯಲ್ಲಿ ಕೂಡ ಸರಿ ಸುಮಾರು ಇಷ್ಟೇ ಮಂದಿ ಇರುತ್ತಾರೆ. ಇವರ ವೆಚ್ಚ ನಿಯಂತ್ರಣಕ್ಕೆ ಸಿಎಂ ಮುಂದಾಗಿದ್ದಾರೆ. ನನಗೆ ಅಧಿಕಾರ ಸಿಕ್ಕರೆ ದುಂದುವೆಚ್ಚಕ್ಕೆ ಕಡಿವಾಣ ಹಾಕಿ ಜನಸಾಮಾನ್ಯರ ಮುಖ್ಯಮಂತ್ರಿ ಆಗಿರುತ್ತೇನೆ. ಜನರಿಗೆ ಸದಾ ಸಮೀಪದಲ್ಲಿರುತ್ತೇನೆ ಎಂದು ಹೇಳಿದ್ದರು. ಅಂತೆಯೇ ಈಗ ಆ ನಿರ್ಧಾರ ಕೈಗೊಂಡಿದ್ದು, ಈ ನಿರ್ಧಾರದಿಂದ ಸರ್ಕಾರಿ ಬೊಕ್ಕಸಕ್ಕೆ ಮಾಸಿಕ 5 ರಿಂದ 10 ಕೋಟಿ ರೂ.ವರೆಗೂ ಉಳಿತಾಯವಾಗಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ