ಬೆಂಗಳೂರು,ಜೂ.2-ರೈತರಿಗೆ ಕಳಪೆ ಬೀಜ ಹಾಗೂ ರಸಗೊಬ್ಬರ ಪೂರೈಕೆ ಮಾಡಿದರೆ ಅಂಥ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಎಚ್ಚರಿಸಿದ್ದಾರೆ.
ವಿಧಾನಸೌಧದಲ್ಲಿಂದು ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಯ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಅವರು, ಯಾವುದೇ ಕಾರಣಕ್ಕೂ ರೈತರಿಗೆ ಕಳಪೆ ಗುಣಮಟ್ಟದ ಬೀಜ ಇಲ್ಲವೆ ರಸಗೊಬ್ಬರ ಪೂರೈಕೆ ಮಾಡಿದರೆ ಸಹಿಸುವುದಿಲ್ಲ ಎಂದಿದ್ದಾರೆ.
ನಾಡಿನ ಅನ್ನದಾತನಿಗೆ ಪೂರೈಕೆ ಮಾಡುವ ಬೀಜ ಮತ್ತು ಗೊಬ್ಬರ ಗುಣಮಟ್ಟದಲ್ಲಿರಬೇಕು. ಯಾವುದೇ ಕಾರಣಕ್ಕೂ ಸರ್ಕಾರ ಇದರಲ್ಲಿ ರಾಜೀಯಾಗುವುದಿಲ್ಲ. ವಿತರಣೆ ಮಾಡುವ ಮುನ್ನ ಅಧಿಕಾರಿಗಳು ಒಂದಲ್ಲ, ಎರಡಲ್ಲ ಮೂರು ಬಾರಿಯಾದರೂ ಪರಿಶೀಲನೆ ನಡೆಸಿಯೇ ಪೂರೈಕೆ ಮಾಡಬೇಕು ಎಂದು ಸಲಹೆ ಮಾಡಿದರು.
ಅನ್ನದಾನತ ಜೊತೆ ಚೆಲ್ಲಾಟವಾಡಿದರೆ ಸಹಿಸುವುದಿಲ್ಲ. ಕೆಲವು ಕಡೆ ಮಧ್ಯವರ್ತಿಗಳು ರೈತರಿಗೆ ಪುಸಲಾಯಿಸಿ ಕಳಪೆ ಗುಣಮಟ್ಟದ ಬೀಜ,ರಸಗೊಬ್ಬರ ಹಾಗೂ ಯಂತ್ರೋಪಕರಣಗಳನ್ನು ನೀಡುತ್ತಾರೆ. ಇಂಥವರ ವಿರುದ್ಧ ಅಧಿಕಾರಿಗಳು ಹದ್ದಿನ ಕಣ್ಣಿಡಬೇಕು.
ಈಗಾಗಲೇ ರಾಜ್ಯದಲ್ಲಿ ಮುಂಗಾರು ಆರಂಭವಾಗಿದ್ದು, ಕೆಲವು ಕಡೆ ಉತ್ತಮವಾದ ಮಳೆಯಾಗುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ಬಿತ್ತನೆ ಕಾರ್ಯ ಆರಂಭವಾಗಲಿದ್ದು, ರೈತರಿಗೆ ಅಗತ್ಯವಿರುವ ಬೀಜ-ಗೊಬ್ಬರ ಹಾಗೂ ಯಂತ್ರೋಪಕರಣಗಳನ್ನು ಅಗತ್ಯಕ್ಕೆ ತಕ್ಕಂತೆ ಸಂಗ್ರಹಿಸಿಡಬೇಕೆಂದು ಸೂಚಿಸಿದ್ದಾರೆ.
ಕೆಲವರು ಪರಿಸ್ಥಿತಿಯ ಲಾಭ ಪಡೆಯಲು ಹವಣಿಸುತ್ತಾರೆ. ಎಲ್ಲಿಯೂ ಕೃತಕ ಅಭಾವ ಸೃಷ್ಟಿಯಾಗದಂತೆ ಎಚ್ಚರಿಕೆ ವಹಿಸಬೇಕು. ಕೃಷಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಯಾವ ಯಾವ ಭಾಗದಲ್ಲಿ ಹೆಚ್ಚಿನ ಅಗತ್ಯವಿದೆಯೋ ಅಂತಹ ಕಡೆ ಪೂರೈಕೆ ಮಾಡಲು ಸಿದ್ದರಿರಬೇಕು. ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ ಮಾಡುವ ಪರಿಪಾಠವನ್ನು ಅಧಿಕಾರಿಗಳು ನಿಲ್ಲಿಸಬೇಕೆಂದು ತಾಕೀತು ಮಾಡಿದ್ದಾರೆ.
ಕಳೆದ ವರ್ಷ ಮುಂಗಾರಿನಲ್ಲಿ ಯಾವ ಯಾವ ಭಾಗಕ್ಕೆ ಎಷ್ಟು ವಿತರಣೆ ಮಾಡಲಾಗಿತ್ತು.ಈಗ ರೈತರಿಂದ ಎಷ್ಟು ಪ್ರಮಾಣದಲ್ಲಿ ಬೇಡಿಕೆ ಬಂದಿದೆ. ಕಾಳಸಂತೆಯಲ್ಲಿ ಮಧ್ಯವರ್ತಿಗಳು ದುಪ್ಪಟ್ಟು ದರದಲ್ಲಿ ಮಾರಾಟ ಮಾಡುವುದಕ್ಕೂ ಕಡಿವಾಣ ಹಾಕಬೇಕು.
ರೈತರು ಎಷ್ಟೇ ಪ್ರಮಾಣದಲ್ಲಿ ಕೇಳಿದರೂ ಪೂರೈಕೆ ಮಾಡಲು ಸಿದ್ಧರಾಗಬೇಕು. ಎಲ್ಲಿಯೂ ಕೂಡ ಅಹಿತಕರ ಘಟನೆ ನಡೆಯದಂತೆ ಅಗತ್ಯ ಸಿದ್ದತೆಗಳನ್ನು ಕೈಗೊಳ್ಳುವಂತೆ ಕುಮಾರಸ್ವಾಮಿ ಸಲಹೆ ಮಾಡಿದರು.
ಈ ವೇಳೆ ಸರ್ಕಾರದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಲಕ್ಷ್ಮಿ ನಾರಾಯಣ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.