ಬಗೆಹರಿದ ಸಮ್ಮಿಶ್ರ ಸರ್ಕಾರದ ಖಾತೆ ಹಂಚಿಕೆ ಬಿಕ್ಕಟ್ಟು: ಜೆಡಿಎಸ್‍ನಲ್ಲಿ ಹೆಚ್ಚಿದ ಸಚಿವಾಕಾಂಕ್ಷಿಗಳ ಸಂಖ್ಯೆ

 

ಬೆಂಗಳೂರು, ಜೂ.2-ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಖಾತೆ ಹಂಚಿಕೆ ಬಿಕ್ಕಟ್ಟು ಬಗೆಹರಿದ ಬೆನ್ನಲ್ಲೇ ಜೆಡಿಎಸ್‍ನಲ್ಲಿ ಸಚಿವಾಕಾಂಕ್ಷಿಗಳ ಸಂಖ್ಯೆ ಹೆಚ್ಚಿದ್ದು, ಸಂಪುಟದಲ್ಲಿ ಸ್ಥಾನ ಪಡೆಯಲು ಪಕ್ಷದ ವರಿಷ್ಠರ ಬಳಿ ಮನವಿ ಮಾಡುತ್ತಿದ್ದಾರೆ.

ಹಾಸನ, ಮಂಡ್ಯ, ಮೈಸೂರು, ತುಮಕೂರು ಜಿಲ್ಲೆಗಳ ಶಾಸಕರು ಸಚಿವ ಸ್ಥಾನ ಪಡೆಯಲು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರನ್ನು ಭೇಟಿ ಮಾಡಿ ಮನವಿ ಮಾಡುತ್ತಿದ್ದಾರೆ.
ಪ್ರದೇಶವಾರು, ಸಮುದಾಯ ಆಧಾರದ ಮೇಲೆ ಸಚಿವ ಸ್ಥಾನ ನೀಡುವ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದಾರೆ. ಸಚಿವ ಸ್ಥಾನ ದೊರೆಯದ ಪ್ರಬಲ ಆಕಾಂಕ್ಷಿಗಳಿಗೆ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನ ನೀಡುವ ಸಾಧ್ಯತೆಗಳಿವೆ.

ಸುಮಾರು 15 ರಿಂದ 20 ಶಾಸಕರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದು, 11 ಮಂದಿ ಶಾಸಕರಿಗೆ ಮಾತ್ರ ಸಚಿವ ಸ್ಥಾನ ದೊರೆಯಲಿದೆ. ಜೆಡಿಎಸ್ ಹಿರಿಯ ಶಾಸಕ ಎಚ್.ಕೆ. ಕುಮಾರಸ್ವಾಮಿ ಅವರಿಗೆ ವಿಧಾನಸಭೆ ಉಪ ಸಭಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡುವ ಸಾಧ್ಯತಗಳಿವೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

ಸಂಭವನೀಯ ಸಚಿವರ ಪಟ್ಟಿಯಲ್ಲಿ ಹಿರಿಯ ಶಾಸಕರಾದ ಎಚ್.ಡಿ.ರೇವಣ್ಣ, ಸಿ.ಎಸ್.ಪುಟ್ಟರಾಜು, ಜಿ.ಟಿ.ದೇವೇಗೌಡ, ಬಂಡೆಪ್ಪ ಕಾಶಂಪೂರ್, ವೆಂಕಟರಾವ್ ನಾಡಗೌಡ, ಎಚ್.ವಿಶ್ವನಾಥ್, ರಾಜಾ ವೆಂಕಟಪ್ಪ ನಾಯಕ, ಕೆ.ಗೋಪಾಲಯ್ಯ, ಬಿ.ಎಂ.ಫಾರೂಕ್, ಎಸ್.ಆರ್.ಶ್ರೀನಿವಾಸ್(ವಾಸು), ಬಿಎಸ್‍ಪಿಯ ಶಾಸಕ ಮಹೇಶ್ ಅವರ ಹೆಸರುಗಳು ಮುಂಚೂಣಿಯಲ್ಲಿ ಕೇಳಿ ಬರುತ್ತಿವೆ.

ಅಲ್ಲದೆ, ಕೆ.ಎಂ.ಶಿವಲಿಂಗೇಗೌಡ, ಬಿ.ಸತ್ಯನಾರಾಯಣ, ಕೆ.ಶ್ರೀನಿವಾಸಗೌಡ, ಡಿ.ಸಿ.ತಮ್ಮಣ್ಣ, ಸಾ.ರಾ.ಮಹೇಶ್, ಎ.ಟಿ.ರಾಮಸ್ವಾಮಿ ಅವರ ಹೆಸರು ಕೂಡ ಸಂಭವನೀಯ ಸಚಿವರ ಸಾಲಿನಲ್ಲಿ ಕೇಳಿ ಬರುತ್ತಿವೆ.
ಇನ್ನೂ ಕೂಡ ಸಂಭವನೀಯ ಸಚಿವರ ಪಟ್ಟಿಯನ್ನು ಜೆಡಿಎಸ್ ವರಿಷ್ಠರು ಅಂತಿಮಗೊಳಿಸಿಲ್ಲ. ಕೊನೆ ಘಳಿಗೆಯಲ್ಲಿ ಸಚಿವ ಸ್ಥಾನ ಜೆಡಿಎಸ್‍ನಲ್ಲಿ ಯಾವ್ಯಾವ ಶಾಸಕರಿಗೆ ದೊರೆಯಲಿದೆ ಎಂಬುದನ್ನು ಕಾದುನೋಡಬೇಕು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ