
ಹೊನ್ನಾವರ: ಯಕ್ಷಗಾನ ಕಲಾಲೋಕದ ಪ್ರಸಿದ್ಧ ಕರ್ಕಿ ಹಾಸ್ಯಗಾರ ಪರಂಪರೆಯ ಹಿರಿಯ ಕಲಾವಿದ ಕೃಷ್ಣ ಪರಮಯ್ಯ ಹಾಸ್ಯಗಾರ (94) ಮಹಾರಾಷ್ಟ್ರದ ಬಲ್ಲಾರಪುರದಲ್ಲಿರುವ ಮಗನ ಮನೆಯಲ್ಲಿ ನಿಧನಹೊಂದಿದರು.
ಮಹಾರಾಷ್ಟ್ರದ ನಾಟ್ಯರಂಗಭೂಮಿಗೆ ಸ್ಫೂರ್ತಿ ನೀಡಿದ್ದ ಹವ್ಯಾಸಿ ಕರ್ಕಿ ಹಾಸ್ಯಗಾರ ಮೇಳದ ಸ್ಥಾಪಕ ದಿ|ಪರಮಯ್ಯ ಹಾಸ್ಯಗಾರರ ಮಗ ಕೃಷ್ಣ, ಹಾಸ್ಯ ವೇಷಗಳಿಂದ ಮೇಳದಲ್ಲಿ ಪ್ರಸಿದ್ಧರಾಗಿದ್ದರು. 43 ವರ್ಷ ಸೈಂಟ್ ಥಾಮಸ್ ಹೈಸ್ಕೂಲಿನಲ್ಲಿ ಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು.
ಗಣೇಶ ಚತುರ್ಥಿ ವೇಳೆ ಇವರ ಮನೆಯಲ್ಲಿ ಮೈದಳೆಯುವ ಗಣೇಶನನ್ನು ನೋಡಲು ಜನ ಸಾಲುಗಟ್ಟಿ ನಿಲ್ಲುತ್ತಿದ್ದರು. ಸುಮಾರು 70 ವರ್ಷಗಳ ಕಾಲ ಇವರು ರಂಗದಲ್ಲಿ ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಹಾಸ್ಯ ಪಾತ್ರಗಳು, ಸಿಂಹ ನೃತ್ಯ ಹಾಗೂ ಪ್ರೇತ ನೃತ್ಯಗಳು ಇವರಿಗೆ ಪ್ರಸಿದ್ಧಿ ತಂದುಕೊಟ್ಟಿದ್ದವು. ನಾಡಿನ ಎಲ್ಲ ಮೇಳಗಳಲ್ಲಿ ಕಲಾವಿದರಾಗಿ ಸೇವೆ ಸಲ್ಲಿಸಿದ್ದ ಇವರು ಸುಮಾರು 2,500ಕ್ಕೂ ಹೆಚ್ಚು ಸಿಂಹ ನೃತ್ಯ ಪ್ರದರ್ಶಿಸಿದ್ದಾರೆ.