ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಇನ್ನೊಬ್ಬ ಬಿಕೆಪಿ ಕಾರ್ಯಕರ್ತ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತರು, ನಾಯಕರ ಮೇಲೆ ನಿರಂತರವಾಗಿ ನಡೆಯುತ್ತಿರುವ ಹಲ್ಲೆಗಳು ದಿನ ದಿನಕ್ಕೆ ಹೆಚ್ಚುತ್ತಿರುವ ಕುರಿತಂತೆ ತಮ್ಮ ಅಸಮಾಧಾನವನ್ನು ಹೊರಹಾಕಿದ ಶಾ “ಬಲರಾಮಪುರದ ದೇವ ಗ್ರಾಮದ ನಿವಾಸಿ ಬಿಜೆಪಿ ಕಾರ್ಯಕರ್ತ ದುಲಾಲ್ ಕುಮಾರ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಆಘಾತಕಾರಿ. ಪಶ್ಚಿಮ ಬಂಗಾಳದ ಭೂಮಿಯಲ್ಲಿನ ಹಿಂಸಾಚಾರ ತಾಂಡವವಾಡುತ್ತಿದೆ, ಇದು ಹೇಯಕೃತ್ಯ ಹಾಗೂ ಅಮಾನವೀಯ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಯ್ದುಕೊಳ್ಳಲು ಮಮತಾ ಬ್ಯಾನರ್ಜಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ” ಟ್ವೀಟ್ ಮಾಡಿದ್ದಾರೆ.
“ನಾನು ದುಃಖಿತ ಕುಟುಂಬಕ್ಕೆ ಸಾಂತ್ವನ ವ್ಯಕ್ತಪಡಿಸುತ್ತೇನೆ. ಭರಿಸಲಾರದ ನಷ್ಟವನ್ನು ಸಹಿಸಿಕೊಳ್ಳಲು ಭಗವಂತನು ಅವರ ಕುಟುಂಬಕ್ಕೆ ಶಕ್ತಿಯನ್ನು ಕರುಣಿಸಲಿ” ಎಂದು ಶಾ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಶುಕ್ರವಾರ ರಾತ್ರಿಯಿಂದ ನಾಪತ್ತೆಯಾಗಿದ್ದ 30 ವರ್ಷದ ಬಿಜೆಪಿ ಕಾರ್ಯಕರ್ತ ದುಲಾಲ್ ಕುಮಾರ್ ಶನಿವಾರ ಹೈ ಟೆನ್ಷನ್ ಟವರ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು..