ಚೀನಾದ ಭೂ ಸರ್ವೇಕ್ಷಣೆ ಉಪಗ್ರಹ ಯಶಸ್ವಿ ಉಡ್ಡಯನ

ಬೀಜಿಂಗ್‌ : ನೈಸರ್ಗಿಕ ವಿಕೋಪ ಹಾಗೂ ಕೃಷಿ ಸಂಪನ್ಮೂಲಗಳ ಹೆಚ್ಚಿನ ಸಂಶೋಧನೆ ನಡೆಸುವ ಉದ್ದೇಶದಿಂದ ಚೀನಾವು ಭೂ ಸರ್ವೇಕ್ಷಣ ಉಪಗ್ರಹವನ್ನು ಯಶಸ್ವಿಯಾಗಿ ಉಡ್ಡಯನ ಮಾಡಿದೆ.

ಈಶಾನ್ಯ ಚೀನಾದಲ್ಲಿರುವ ಜಿಕ್ವಾನ್‌ ಸ್ಯಾಟಲೈಟ್‌ ಕೇಂದ್ರದಿಂದ ಮಧ್ಯಾಹ್ನ 12.13ಕ್ಕೆ ಗೌಫೆನ್‌-6 ಉಪಗ್ರಹವನ್ನು ಉಡ್ಡಯನಗೊಳಿಸಿದೆ.

ನೈಸರ್ಗಿಕ ವಿಕೋಪಗಳಾದ ಸುನಾಮಿ, ಬಿರುಗಾಳಿ, ಮೇಘ ಸ್ಪೋಟ, ಭೂಕಂಪ ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ಸಂಶೋಧನೆ ನಡೆಸಲು ಉಪಗ್ರಹ ಅಗತ್ಯ ದತ್ತಾಂಶಗಳನ್ನು ನೀಡಲಿದೆ. ಅಂತೆಯೇ ಕೃಷಿ ಸಂಪನ್ಮೂಲಗಳ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸುವುದು, ನೀರಾವರಿ ಉಪಯೋಗ, ಅಂತರ್ಜಲ ಮಟ್ಟಗಳ ಬಗ್ಗೆ ಅಧ್ಯಯನಕ್ಕೂ ಉಪಗ್ರಹ ಅಗತ್ಯ ದತ್ತಾಂಶಗಳನ್ನು ಪತ್ತೆ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.

ಲಾಂಗ್ ಮಾರ್ಚ್‌ -2ಡಿ ರಾಕೆಟ್‌ ಮೂಲಕ ಕೈಗೊಂಡ 276ನೇ ಯೋಜನೆ ಇದಾಗಿದ್ದು, ನಿಗದಿತ ಅವಧಿಯಲ್ಲಿ ಕಕ್ಷೆಗೆ ಸೇರಿಸಲಾಗಿದೆ. ಇದೇ ವೇಳೆ ವೈಜ್ಞಾನಿಕ ಪ್ರಯೋಗಗಳನ್ನು ನಡೆಸಲು ಲೊಜಿಯಾ-1 ಹೆಸರಿನ ಮತ್ತೊಂದು ಉಪ್ರಗಹವನ್ನೂ ಜತೆಯಲ್ಲಿ ರವಾನಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ