ದೆಹಲಿ: ಆರ್ಎಸ್ಎಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಂತೆ ಒತ್ತಡ ಹೇರುತ್ತಿರುವವರಿಗೆ ಜೂನ್ 7ರಂದು ನಾಗ್ ಪುರದಲ್ಲಿ ಉತ್ತರ ಹೇಳುವುದಾಗಿ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದಾರೆ.
“ನಾನು ಹೇಳಬೇಕಾಗಿರುವುದನ್ನು ನಾಗ್ ಪುರದಲ್ಲಿ ಹೇಳುತ್ತೇನೆ. ನನಗೆ ಆರ್ಎಸ್ಎಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಿರುವಂತೆ ಕೋರಿ ಹಲವು ಪತ್ರಗಳು, ದೂರವಾಣಿ ಕರೆಗಳು ಬಂದಿದೆ. ನಾನು ಯಾವುದಕ್ಕೂ ಪ್ರತಿಕ್ರಯಿಸಿಲ್ಲ. ಅವರಿಗೆಲ್ಲಾ ನಾನು ನಾಗ್ ಪುರದಲ್ಲಿಯೇ ಪ್ರತಿಕ್ರಿಯೆ ನೀಡುತ್ತೇನೆ” ಬೆಂಗಾಲಿ ದಿನಪತ್ರಿಕೆ ಆನಂದ್ ಬಜಾರ್ ಪತ್ರಿಕಾದಲ್ಲಿ ಮುಖರ್ಜಿ ಅವರ ಈ ಹೇಳಿಕೆ ದಾಖಲಾಗಿದೆ.
ಜೈರಾಮ್ ರಮೇಶ್, ಸಿ.ಕೆ. ಜಾಫರ್ ಶರೀಫ್ ಸೇರಿ ಹಲವಾರು ಹಿರಿಯ ಕಾಂಗ್ರೆಸ್ ನಾಯಕರು ಮುಖರ್ಜಿ ಅವರ ನಿರ್ಧಾರವನ್ನು ಮರುಪರಿಶೀಲಿಸುವಂತೆ ಮನವಿ ಮಾಡಿದ್ದರು.
ಕೇರಳ ವಿಧಾನಸಭೆ ವಿರೋಧ ಪಕ್ಷದ ನಾಯಕ ರಮೇಶ್ ಚೆನ್ನಿಠಲ ’ಮಾಜಿ ರಾಷ್ಟ್ರಪತಿಗಳು ಆರ್ಎಸ್ಎಸ್ ಸಮಾವೇಶದಲ್ಲಿ ಪಾಲ್ಗೊಳ್ಳುವುದರಿಂದ ಜಾತ್ಯಾತೀತ ಮನಸ್ಸುಗಳಿಗೆ ಘಾಸಿಯಾಗಲಿದೆ’ ಎಂದಿದ್ದಾರೆ.
ಆದರೆ ಕಾಂಗ್ರೆಸ್ ಮುಖಂಡರಾದ ಪಿ. ಚಿದಂಬರಂ ಮುಖರ್ಜಿಯವರು ಆರ್ಎಸ್ಎಸ್ ಕಾರ್ಯಕ್ರಮಕ್ಕೆ ಹಾಜರಾಗಬೇಕು. ಅಲ್ಲಿ ಮಾತನಾಡುವ ವೇಳೆ ಆರ್ ಎಸ್ ಎಸ್ ಸಿದ್ದಾಂತದಲಿರುವ ದೋಷಗಳನ್ನು ಎತ್ತಿ ತೋರಬೇಕು ಎಂದಿದ್ದಾರೆ. ಮುಖರ್ಜಿಯವರು ಆರ್ಎಸ್ಎಸ್ ಆಮಂತ್ರಣವನ್ನು ಒಪ್ಪಿದ್ದಾರೆ. ಅದರಂತೆ ಅವರು ಸಮಾವೇಶಕ್ಕೆ ಹಾಜರಾಗಬೇಕು ಎಂದು ಚಿದಂಬರಂ ಹೇಳಿದರು.