ಅಹಮದಾಬಾದ್,ಜೂ.1
257 ಜನರ ಸಾವಿಗೆ ಹಾಗೂ 700 ಕ್ಕೂ ಅಧಿಕ ಜನರು ಗಾಯಾಳುಗಳಾಗಲು ಕಾರಣವಾದ 1993ರ ಮುಂಬಯಿ ಸರಣಿ ಬ್ಲಾಸ್ಟ್ ಕೇಸ್‌ನ ಆರೋಪಿ ಮೊಹಮದ್ ಲಂಬುವನ್ನು ಗುಜರಾತ್ ಎಟಿಎಸ್ ಪೊಲೀಸರು ಗುರುವಾರ ರಾತ್ರಿ ಬಂಧಿಸಿದ್ದಾರೆ.
ಬಂಧಿತ ಲಂಬು ಭೂಗತ ಪಾತಕಿ ದಾವೂದ್ ಇಬ್ರಾಹಿಂ ಆಪ್ತ ನಾಗಿದ್ದ.
ಮುಂಬಯಿ ಸರಣಿ ಬಾಂಬ್ ಸ್ಫೋಟ ಸಂಭವಿಸಿದ 24 ವರ್ಷಗಳ ತರುವಾಯ ವಿಶೇಷ ಟಾಟಾ ನ್ಯಾಯಾಲಯ ಕಳೆದ ವರ್ಷ ಜೂನ್ 16ರಂದು ಅಬು ಸಲೇಂ ಮತ್ತು ಮುಸ್ತಫಾ ದೊಸ್ಸಾ ಸೇರಿದಂತೆ ಆರು ಪ್ರಮುಖ ಆರೋಪಿಗಳನ್ನು ದೋಷಿ ಎಂದು ಘೋಷಿಸಿ ಒಬ್ಬ ಆರೋಪಿಯನ್ನು ಖುಲಾಸೆಗೊಳಿಸಿತ್ತು.
2005ರಲ್ಲಿ ಪೋರ್ಚುಗಲ್‌ನಿಂದ ಭಾರತಕ್ಕೆ ಗಡೀಪಾರುಗೊಂಡಿದ್ದ ಅಬು ಸಲೇಂ, ಯುಎಇಯಿಂದ ಭಾರತಕ್ಕೆ ಗಡೀಪಾರುಗೊಂಡಿದ್ದ ಮುಸ್ತಫಾ ದೊಸ್ಸಾ, ಮೊಹಮ್ಮದ್ ತಾಹೀರ್ ಮರ್ಚಂಟ್ ಅಲಿಯಾಸ್ ತಾಹಿರ್ ಟಕ್ಲಾ, ಕರೀಮುಲ್ಲಾ ಖಾನ್, ರಿಯಾಜ್ ಸಿದ್ದಿಕಿ ಮತ್ತು ಫಿರೋಜ್ ಅಬ್ದುಲ್ ರಶೀದ್ ಖಾನ್ ದೇಶದಲ್ಲಿ ಈ ತನಕ ನಡೆದಿರುವ ಅತ್ಯಂತ ಘೋರ ನರಹತ್ಯೆಯ ಭಯೋತ್ಪಾದಕ ದಾಳಿ ಎಂದು ಪರಿಗಣಿಸಲಾದ ಮುಂಬಯಿ ಸರಣಿ ಸ್ಫೋಟದ ಮುಖ್ಯ ದೋಷಿಗಳಾಗಿದ್ದರು. ಮುಸ್ತಫಾ ದೊಸ್ಸಾ ಕಳೆದ ಜೂನ್ 28ರಂದು ಮುಂಬಯಿ ಜೆಜೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ.