ಬೆಂಗಳೂರು, ಜೂ.1- ವಾಚ್‍ಮಾನ್ ಕೆಲಸ ಆದ್ರೆ ನಂಬಿಕೆ ಕೆಲಸ ಅಲ್ವ. ಅಂತಹ ಜವಾಬ್ದಾರಿ ಕೆಲಸವನ್ನು ಹೈಕಮಾಂಡ್ ನನಗೆ ಕೊಟ್ಟಿದೆ ಎಂದು ಕಾಂಗ್ರೆಸ್ ಮುಖಂಡ, ಶಾಸಕ ಡಿ.ಕೆ.ಶಿವಕುಮಾರ್ ವಿಡಂಬನಾತ್ಮಕವಾದ ಹೇಳಿಕೆಯನ್ನು ನೀಡಿದ್ದಾರೆ.
ಅವರ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಇಂಧನ ಖಾತೆ ಮಿಸ್ ಆಗಿದ್ದಕ್ಕೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಡಿಸಿಎಂ ಅಥವಾ ಕೆಪಿಸಿಸಿ ಅಧ್ಯಕ್ಷ ಹುದ್ದೆಯನ್ನು ಕೇಳಿದ್ದೇನೆ ಎಂದು ಯಾರು ಹೇಳಿದ್ದಾರೆ ಎಂದು ಪತ್ರಕರ್ತರನ್ನು ಪ್ರಶ್ನಿಸಿದರು.
ರೇವಣ್ಣ ಅವರ ಜೊತೆ ಚರ್ಚಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ರೇವಣ್ಣ ಅವರು ದೊಡ್ಡವರು. ಅವರ ಜೊತೆ ನನ್ನನ್ನು ಹೋಲಿಸಬೇಡಿ. ಅವರ ಜೊತೆ ಚರ್ಚಿಸಲು ನಾನು ಮೆಂಟಲ್ ಗಿರಾಕಿ ಅಲ್ಲ. ನನ್ನ ಗುರಿಯೇ ಬೇರೆ, ನನ್ನ ಟಾರ್ಗೆಟ್ ಬೇರೆ ಎಂದು ಹೇಳಿದರು.
ಕೆಲವರನ್ನು ಕೆಲಸಕ್ಕೆ ಇಟ್ಟುಕೊಂಡಿರುತ್ತಾರೆ, ಇನ್ನು ಕೆಲವರನ್ನು ಕುರ್ಚಿಗಾಗಿ ನೇಮಿಸಿಕೊಂಡಿರುತ್ತಾರೆ. ನಾನು ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ಖಾತೆಯನ್ನು ಕೇಳಿಲ್ಲ. ನಾನೊಬ್ಬ ಸಾಮಾನ್ಯ ಶಾಸಕ ಅಷ್ಟೆ ಎಂದರು.