ಕುಣಿಗಲ್, ಏ.30- ಸಾಸಿವೆ, ಜೀರಿಗೆ ಡಬ್ಬಿಗಳಲ್ಲಿ ಒಂದಿಷ್ಟು ಚಿಲ್ಲರೆ ಕಾಸು ಕೂಡಿಟ್ಟು ಗೃಹೋಪಯೋಗಿ ವಸ್ತುಗಳನ್ನು ಖರೀದಿಸೋಣ ಎಂದು ಮಹಿಳೆಯರು ಖಾಸಗಿ ಕಂಪೆನಿಯೊಂದಕ್ಕೆ ಹಣ ಕಟ್ಟಿ ಮೋಸ ಹೋಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕಡಿಮೆ ದುಡ್ಡಿನಲ್ಲಿ ನಿಮ್ಮ ಮನೆಗೆ ಗೃಹೋಪಯೋಗಿ ವಸ್ತುಗಳು ಸಿಗುತ್ತವೆ ಎಂದು ಕಂಪೆನಿಯೊಂದು ಮಹಿಳೆಯರಿಂದ ತಿಂಗಳಿಗಿಂತಿಷ್ಟು ಹಣ ಕಟ್ಟಿಸಿಕೊಂಡು ಮೋಸ ಮಾಡುತ್ತಿದ್ದ ಆಸಾಮಿಗಳಿಬ್ಬರನ್ನು ಮಹಿಳೆಯರೇ ಹಿಡಿದು ಥಳಿಸಿ ಪೆÇಲೀಸರಿಗೆ ಒಪ್ಪಿಸಿದ್ದಾರೆ.
ಪಟ್ಟಣದ ಆರ್ಎಂಸಿ ಯಾರ್ಡ್ ಬಳಿ ಇರುವ ಶ್ರೀ ಮಂಜುನಾಥ ಗೃಹೋಪಯೋಗಿ ಸಂಸ್ಥೆ ಹೆಸರಿನಡಿ ಪ್ರಭಾಕರ್ ಮತ್ತು ಕಿಟ್ಟಿ ಎಂಬುವವರು ಮಹಿಳೆಯರ ಬಳಿ ಹಣ ಕಟ್ಟಿಸಿಕೊಂಡಿದ್ದಾರೆ.
ಆದರೆ, ವಸ್ತುಗಳನ್ನು ನೀಡದೆ ಇರುವುದರಿಂದ ಮಹಿಳೆಯರು ಅಂಗಡಿಗೆ ಬಂದು ವಿಚಾರಿಸಿದ್ದಾರೆ. ಈ ವೇಳೆ ಚುನಾವಣಾ ಅಭ್ಯರ್ಥಿಯೊಬ್ಬರು ಇಲ್ಲಿಗೆ ಪ್ರಚಾರಕ್ಕೆ ಬರುತ್ತಾರೆ. ಆ ವೇಳೆ ಗೃಹೋಪಯೋಗಿ ವಸ್ತುಗಳನ್ನು ವಿತರಿಸಲಾಗುತ್ತದೆ ಎಂದು ಮಾಲೀಕರು ಹೇಳಿ ಕಳುಹಿಸಿದ್ದಾರೆ.
ಅದರಂತೆಯೇ ಮಹಿಳೆಯರು ಸುಮ್ಮನಾಗಿದ್ದಾರೆ. ಇಂದು ಅಭ್ಯರ್ಥಿ ಚುನಾವಣಾ ಪ್ರಚಾರ ಮುಗಿಸಿದರೂ ಕೂಡ ವಸ್ತುಗಳನ್ನು ನೀಡಲಿಲ್ಲ. ಇದರಿಂದ ಆಕ್ರೋಶಗೊಂಡ ಮಹಿಳೆಯರು ಪ್ರಚಾರದ ನಡುವೆ ಇದ್ದ ಪ್ರಭಾಕರ್ ಮತ್ತು ಕಿಟ್ಟಿಯನ್ನು ಹಿಡಿದು ಥಳಿಸಿ ಪೆÇಲೀಸರಿಗೆ ಒಪ್ಪಿಸಿದ್ದಾರೆ.
ಚುನಾವಣಾ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ವಸ್ತುಗಳನ್ನು ವಿತರಿಸಲಾಗುತ್ತಿಲ್ಲ ಎಂದು ಮಾಲೀಕರು ಪಿಎಸ್ಐ ಪುಟ್ಟೇಗೌಡ ಅವರಿಗೆ ಸಮಜಾಯಿಷಿ ನೀಡಿದ್ದಾರೆ.
ಈ ಬಗ್ಗೆ ಪಟ್ಟಣ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೆÇಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.