ಮುಂಬೈನ 26/11ರ ದಾಳಿಯ ಭಯೋತ್ಪಾದಕರನ್ನು ಕಾನೂನು ಕಟಕಟೆಗೆ ಕರೆತರುವ ಭಾರತದ ಪ್ರಯತ್ನಕ್ಕೆ ದೊಡ್ಡ ಹಿನ್ನಡೆ:

ಇಸ್ಲಾಮಾಬಾದ್, ಏ.30-ಮುಂಬೈನ 26/11ರ ದಾಳಿಯ ಭಯೋತ್ಪಾದಕರನ್ನು ಕಾನೂನು ಕಟಕಟೆಗೆ ಕರೆತರುವ ಭಾರತದ ಪ್ರಯತ್ನಕ್ಕೆ ದೊಡ್ಡ ಹಿನ್ನಡೆಯಾಗಿದೆ. ಒಂಭತ್ತು ವರ್ಷಗಳಿಂದ ಈ ಪ್ರಕರಣದಲ್ಲಿ ನಿಷ್ಪಕ್ಷಪಾತ ಮತ್ತು ನ್ಯಾಯಯುತ ವಿಚಾರಣೆ ನಡೆಸುತ್ತಿದ್ದ ಮುಖ್ಯ ಅಭಿಯೋಜಕರನ್ನು(ಚೀಫ್ ಪ್ರಾಸಿಕ್ಯೂಟರ್) ಪಾಕಿಸ್ತಾನ ಗೃಹ ಸಚಿವಾಲಯ ವಜಾಗೊಳಿಸಿದ್ದು, ಮುಂದಿನ ತನಿಖೆಗೆ ಹಿನ್ನಡೆಯಾಗಿದೆ.
ಸರ್ಕಾರ ನಿಗದಿತಗೊಳಿಸಿದ ಮಾರ್ಗದಲ್ಲಿ ತನಿಖೆ ನಡೆಯುತ್ತಿಲ್ಲ. ಸ್ವತಂತ್ರ ಧೋರಣೆ ಅನುಸರಿಸಿ ಏಕಪಕ್ಷೀಯವಾಗಿ ವಿಚಾರಣೆ ನಡೆಸುತ್ತಿದ್ದಾರೆ ಎಂಬ ಕಾರಣ ನೀಡಿ ವಿಶೇಷ ಅಭಿಯೋಜಕ ಚೌಧರಿ ಅಜರ್ ಅವರನ್ನು ತೆಗೆದುಹಾಕಲಾಗಿದೆ.
ಮುಂಬೈ ದಾಳಿಯ ಸೂತ್ರಧಾರ ಸೇರಿದಂತೆ 2009ರಿಂದಲೂ ಅವರು ಈ ಪ್ರಕರಣದ ಬಗ್ಗೆ ಪಕ್ಷಪಾತವಿಲ್ಲದೇ ಹಾಗೂ ನ್ಯಾಯಸಮ್ಮತ ರೀತಿಯಲ್ಲಿ ವಿಚಾರಣೆ ನಡೆಸುತ್ತಿದ್ದರು. ಇದು ಆಗಿನಿಂದಲೂ ಕೆಲವು ಉನ್ನತಾಧಿಕಾರಿಗಳ ಕೆಂಗಣ್ಣಿಗೆ ಅಜರ್ ಗುರಿಯಾಗಿದ್ದರು. ಇವರು ಪೂರ್ವಗ್ರಹ ಪೀಡಿತರಾಗಿ ತನಿಖೆ ಮತ್ತು ವಿಚಾರಣೆ ಕೈಗೊಂಡಿದ್ದಾರೆ. ಏಕಪಕ್ಷೀಯ ಮತ್ತು ಸ್ವತಂತ್ರ ನಿರ್ಧಾರಗಳನ್ನು ಕೈಗೊಂಡಿದ್ದಾರೆ. ಸರ್ಕಾರ ನೀತಿ ನಿಯಮಗಳನ್ನು ಪಾಲಿಸಿಲ್ಲ. ಹೀಗಾಗಿ ಅವರನ್ನು ಹುದ್ದೆಯಿಂದ ವಜಾಗೊಳಿಸಲಾಗಿದೆ ಎಂದು ಪಾಕಿಸ್ತಾನ ಗೃಹ ಸಚಿವಾಲಯ ತಿಳಿಸಿದೆ.
ಮುಂಬೈನಲ್ಲಿ ನಡೆದ ಭಯೋತ್ಪಾದಕರ ದಾಳಿ ಬಗ್ಗೆ ಸಮಗ್ರ ತನಿಖೆ ನಡೆಸಲು ಭಾರತದೊಂದಿಗೆ ಸಹಕಾರ ನೀಡಬೇಕೆಂದು ಪಾಕಿಸ್ತಾನಕ್ಕೆ ಅಮೆರಿಕದ ವಿದೇಶಾಂಗ ಇಲಾಖೆ ವಕ್ತಾರ ಮಾರ್ಕ್ ಟೋನರ್ ಆಗ್ರಹಿಸಿದ್ದ ಬೆನ್ನಲ್ಲೇ ಈ ಬೆಳವಣಿಗೆ ಕಂಡುಬಂದಿದೆ.
26ನೇ ನವೆಂಬರ್ 2008ರಲ್ಲಿ ಪಾಕಿಸ್ತಾನ ಮೂಲದ ನಿಷೇಧಿತ ಲಷ್ಕರ್-ಎ-ತೈಬಾ (ಎಲ್‍ಇಟಿ) ಭಯೋತ್ಪಾದನೆ ಸಂಘಟನೆಯ 10 ಉಗ್ರರು ಮುಂಬೈನ ತಾಜ್ ಹೋಟೆಲ್ ಸೇರಿದಂತೆ ನಾಲ್ಕು ದಿನಗಳ ಕಾಲ 12 ಸ್ಥಳಗಳ ಮೇಲೆ ಬಾಂಬ್ ದಾಳಿ ಮತ್ತು ಗುಂಡಿನ ಸುರಿಮಳೆಗರೆದಿದ್ದರು. ಈ ದಾಳಿಯಲ್ಲಿ 164 ಮಂದಿ ಮೃತಪಟ್ಟು, 308 ಜನ ಗಾಯಗೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ